ಗುತ್ತಿಗೆ ಪೌರ ಕಾರ್ಮಿಕರ ಕಾಯಮಾತಿಗೆ ಒತ್ತಾಯ

| Published : Sep 24 2025, 01:00 AM IST

ಗುತ್ತಿಗೆ ಪೌರ ಕಾರ್ಮಿಕರ ಕಾಯಮಾತಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ನಗರಸಭೆಯಲ್ಲಿ ಗುತ್ತಿಗೆದಾರರಾಗಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಕೂಡಲೇ ಕಾಯಂಗೊಳಿಸಬೇಕು ಎಂದು ಪೌರ ಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜು ಆಗ್ರಹಿಸಿದರು.

ಕನಕಪುರ: ನಗರಸಭೆಯಲ್ಲಿ ಗುತ್ತಿಗೆದಾರರಾಗಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಕೂಡಲೇ ಕಾಯಂಗೊಳಿಸಬೇಕು ಎಂದು ಪೌರ ಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜು ಆಗ್ರಹಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ನಗರಸಭೆ ಆಯೋಜಿಸಿದ್ದ ಪೌರಸೇವಾ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯ ಸಚಿವ ಸಂಪುಟದಲ್ಲಿ ಪ್ರಭಾವಿ ನಾಯಕರಾಗಿದ್ದು, ಬಹುಕಾಲದಿಂದಲೂ ನಗರಸಭೆ ಹಾಗೂ ಪುರಸಭೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್ ಮಾತನಾಡಿ, ಡಾ. ಅಂಬೇಡ್ಕರ್ ಸಂವಿಧಾನ ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ದೇಶವನ್ನು ಮುನ್ನಡೆಸಿದ್ದು ಕಾಂಗ್ರೆಸ್ ಪಕ್ಷ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾನಕಾನಹಳ್ಳಿಗೆ ಹೊಸರೂಪ ನೀಡಿ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕನಕನಗರವಾಗಿಸಿದ್ದಾರೆ. ಇವರೊಂದಿಗೆ ಮಾಜಿ ಸಂಸದ ಡಿ.ಕೆ ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ ಜೊತೆಗೂಡಿ ಇಡೀ ತಾಲೂಕನ್ನು ರಾಜ್ಯದಲ್ಲೇ ಮಾದರಿ ತಾಲೂಕು ಮಾಡಲು ಹಗಲಿರುಳು ಹೆಗಲುಕೊಟ್ಟು ದುಡಿದಿರುವುದಾಗಿ ಹೇಳಿದರು.

ನಗರಸಭೆ ಪ್ರಭಾರ ಆಯುಕ್ತ ಬಿ.ಮಹೇಂದ್ರ ಮಾತನಾಡಿ, ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಅವರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕರು ನಗರ ನಾಗರಿಕರಿಗೆ ವೈದ್ಯರಿದ್ದಂತೆ. ಇವರ ಸೇವೆ ಅನನ್ಯವಾದದ್ದು. ಅವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳು ದೊರೆಯುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ಹೇಮಾರಾಜು, ಉಪಾಧ್ಯಕ್ಷ ಸೈಯದ್ ಸಾಧಿಕ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಎನ್.ದಿಲೀಪ್, ನಗರಸಭೆ ಮಾಜಿ ಅಧ್ಯಕ್ಷರಾದ ಕೋಟೆ ಕಿರಣ್, ಮೀಸೆ ವೆಂಕಟೇಶ್, ಲಕ್ಷ್ಮಿ ಗೋವಿಂದಪ್ಪ, ನಗರಸಭಾ ಸದಸ್ಯರಾದ ವಿಜಯಕುಮಾರ್, ಬೇಕರಿ ನಾಗರಾಜು, ನಗರದ ದಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್, ಮುಖಂಡರಾದ ನೀಲಿ ರಮೇಶ್, ನಗರ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಜನಾರ್ದನ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 02:

ಕನಕಪುರದಲ್ಲಿ ನಗರಸಭೆ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.