ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಪ್ರವಾಸಿತಾಣ ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪುಗಳಿಗೆ ಒಡ್ಡಿರುವ ನಿರ್ಬಂಧ ತೆರವುಗೊಳಿಸಬೇಕೆಂದು ಮಾಂದಲ್ ಪಟ್ಟಿ ಜೀಪ್ ಮಾಲೀಕರು ಹಾಗೂ ಚಾಲಕರು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಲಹೆಗಾರ ಯಾಲದಾಳು ಮನೋಜ್ ಬೋಪಯ್ಯ ಹಾಗೂ ಜೀಪ್ ಮಾಲೀಕರು, ಚಾಲಕರು ಪ್ರಾದೇಶಿಕ ಸಾರಿಗೆ ಇಲಾಖೆ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವ ಮೂಲಕ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.ಕಳೆದ ಅನೇಕ ವರ್ಷಗಳಿಂದ ಪ್ರವಾಸಿಗರನ್ನು ಜೀಪ್ ನಲ್ಲಿ ಕರೆದೊಯ್ಯುವ ಮೂಲಕ ಸ್ಥಳೀಯ ಯುವಕರು ಉದ್ಯೋಗವನ್ನು ಕಂಡುಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಬಾಡಿಗೆ ಮಾಡುವ ಸಂದರ್ಭ ಯಾರೂ ಕಾನೂನು ಉಲ್ಲಂಘಿಸಿಲ್ಲ. ಆದರೆ ಅಧಿಕಾರಿಗಳು ಬದಲಾದಂತೆ ಯಾರದ್ದೋ ಒತ್ತಡಕ್ಕೆ ಮಣಿದು ಒಂದೊಂದು ನಿಯಮ ಜಾರಿ ಮಾಡಲಾಗುತ್ತಿದ್ದು, ಇದರಿಂದ ಚಾಲಕರ ಜೀವನ ಸಂಕಷ್ಟಕ್ಕೆ ಸಿಲುಕುತ್ತಿದೆ. ಸಾಲ ಮಾಡಿ ಜೀಪ್ ಖರೀದಿಸಲಾಗಿದೆ, ಇದೀಗ ದಿಢೀರ್ ಆಗಿ ನಿರ್ಬಂಧ ಹೇರಿರುವುದರಿಂದ ಸಾಲ ತೀರಿಸಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇತ್ತೀಚಿನ ಹತ್ತು ವರ್ಷಗಳಲ್ಲಿ ಕೊಡಗಿನಲ್ಲಿ ಹೋಂಸ್ಟೇಗಳು ಹೆಚ್ಚಾದಂತೆ ಮಾಂದಲ್‌ಪಟ್ಟಿಗೆ ತೆರಳುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಯಿತು. ಅದರಂತೆ ಮಾಂದಲ್‌ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪುಗಳ ಸಂಖ್ಯೆಯು ಬೆಳೆಯಲಾರಂಭಿಸಿತು. ಯಾವಾಗ ಈ ಉದ್ಯೋಗವು ಲಾಭದಾಯಕವಾಗಿ ಕಂಡು ಬರಲು ಆರಂಭಿಸಿತೋ ಅಂದಿನಿಂದ ಕೆಲವರು ವೈಯುಕ್ತಿಕ ಹಿತಾಸಕ್ತಿಗಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು.ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳು ವರ್ಗಾವಣೆಯಾದಂತೆಲ್ಲ ತಮ್ಮದೇ ಆದ ಒಂದು ಕಾನೂನು ರೂಪುಗೊಳ್ಳುತ್ತದೆ. ಅದರಂತೆ ರಾಜಕೀಯ ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳು ಬದಲಾದಂತೆ ತಮ್ಮದೇ ಆದ ಕಾನೂನು ರೂಪಿಸುತ್ತಾರೆ. ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿಗಳ ಕಾನೂನೇ ಬೇರೆ. ಈ ಅತಂತ್ರ ವ್ಯವಸ್ಥೆಯ ನಡುವೆ ಬಲಿಪಶುಗಳಾಗುತ್ತಿರುವವರು ಜೀಪ್ ಮಾಲೀಕರು ಹಾಗೂ ಚಾಲಕರು ಎಂದು ಆರೋಪಿಸಿದರು.
ಇತ್ತೀಚಿನ ವರ್ಷಗಳಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಕೊಡಗಿಗೆ ಪ್ರವಾಸಿಗರ ದಂಡೇ ಹರಿದು ಬರುವುದು ಸರ್ವೆ ಸಾಮಾನ್ಯವಾಗಿದೆ. ಈ ರೀತಿಯ ದಿನಗಳಲ್ಲಿ ಮಾತ್ರ ಯುವಕರಿಗೆ ಸಾಮಾನ್ಯಕ್ಕಿಂತ ಒಂದು ಅಥವಾ ಎರಡು ಟ್ರಿಪ್ ಹೆಚ್ಚು ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಅವಕಾಶ ದೊರೆಯುತ್ತದೆ. ಆದರೆ ಸಾರಿಗೆ ಅಧಿಕಾರಿಗಳು ಏಕಾಏಕಿ ಜೀಪುಗಳನ್ನು ತಡೆ ಹಿಡಿದು ಇಲ್ಲಸಲ್ಲದ ದಂಡಗಳನ್ನು ವಿಧಿಸಲು ಆರಂಭಿಸಿದ್ದಾರೆ ಎಂದು ಆರೋಪಿಸಿದರು.ಇದೀಗ ಮಾಂದಲಪಟ್ಟಿ ಜೀಪುಗಳ ಓಡಾಟವಿಲ್ಲದೆ ಸ್ತಬ್ಧವಾದಂತ್ತಾಗಿದೆ. ಅಧಿಕಾರಿಗಳು ಇಲ್ಲಸಲ್ಲದ ನಿಯಮಗಳನ್ನು ಪಾಲಿಸಲು ಜೀಪು ಮಾಲೀಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇತರ ಗುಡ್ಡಗಾಡಿನ ಪ್ರವಾಸಿತಾಣಗಳಾದ ಚಿಕ್ಕಮಗಳೂರು, ಆಗುಂಬೆ, ಕೆಮ್ಮಣ್ಣುಗುಂಡಿ, ಬಂಡೀಪುರ, ನಾಗರಹೊಳೆ ಈ ಎಲ್ಲಾ ಸ್ಥಳಗಳಲ್ಲಿಯೂ ಕೊಡಗಿನ ಮಾಂದಲ್ ಪಟ್ಟಿಯ ಮಾದರಿಯಲ್ಲಿಯೇ ಜೀಪುಗಳು ಪ್ರವಾಸಿಗರನ್ನು ಕರೆದೊಯ್ಯುತ್ತಿವೆ. ಆದರೆ ಮಾಂದಲ್ಪಟ್ಟಿಯ ಜೀಪು ಚಾಲಕ ಹಾಗೂ ಮಾಲೀಕರಿಗೆ ಮಾತ್ರ ಶಿಕ್ಷೆ ವಿಧಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ವಕೀಲರ ಮೂಲಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಮಾಂದಲ್ಪಟ್ಟಿ ಜೀಪ್ ಚಾಲಕ ಹಾಗೂ ಮಾಲೀಕರು ಭೇಟಿಯಾದ ಸಂದರ್ಭ ನುಣಿಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.ಕುಟುಂಬ ಸಹಿತ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ತೆರಳಿ ಯುವಕರ ಉದ್ಯೋಗದ ದೃಷ್ಟಿಯಿಂದ ನಿಯಮಗಳನ್ನು ಸಡಿಲಿಸಿ ಪ್ರವಾಸಿಗರನ್ನು ಕರೆದೊಯ್ಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗುವುದು. ಇದಕ್ಕೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಎಸ್.ಯು.ತಮ್ಮಯ್ಯ, ಚೆರಿಯಮನೆ ಆನಂದ್, ಟಿ.ಬಿ.ಚೇತನ್, ಎ.ಬಿ.ಲೋಕೇಶ್ ಹಾಗೂ ಶಹಬಾಜ಼್ ಆಲಿ ಎಂ.ಎ. ಇದ್ದರು.