ಸಾರಾಂಶ
ಎಚ್.ಆರ್.ಮಾದೇಶ್
ಕನ್ನಡಪ್ರಭ ವಾರ್ತೆ ಮಾಗಡಿತಾಲೂಕು ರಾಗಿ, ಅವರೆಕಾಯಿ, ತಾಜಾ ತರಕಾರಿಗೆ ಪ್ರಸಿದ್ಧಿಯಾದಷ್ಟೇ ಪರಿಶುದ್ಧವಾದ ಹರಳೆಣ್ಣೆಗೂ ಹೆಸರುವಾಸಿ. ಮಂಜುನಾಥ್ ಆಯಿಲ್ ಮಿಲ್ ಮಾಲೀಕ ಚಂದ್ರಶೇಖರ್ ಕುಟುಂಬ 40 ವರ್ಷಗಳಿಂದ ಬೇಯಿಸಿದ ಹರಳೆಣ್ಣೆ ಮಾರಾಟದಲ್ಲಿ ತೊಡಗಿಕೊಂಡಿದೆ.
ಚಂದ್ರಶೇಖರ್ ಪಟ್ಟಣದ ಡೂಮ್‌ಲೈಟ್ ಸರ್ಕಲ್‌ನಲ್ಲಿ ಮೊದಲು ಹೊಂಗೆಎಣ್ಣೆ ಮರಾಟ ಮಾಡುತ್ತಿದ್ದರು. ಬಳಿಕ ಚಂದ್ರಶೇಖರ್ ಕೂಡ ಎಣ್ಣೆ ವ್ಯಾಪಾರವನ್ನೇ ಮುಂದುವರಿಸಿದರು. ತಾಲೂಕು ಕಚೇರಿ ಮುಂದೆ ಮಂಜುನಾಥ ಆಯಿಲ್ ಮಿಲ್ ಆರಂಭಿಸಿ ಹರಳೆಣ್ಣೆ ಮಾರಲು ಶುರು ಮಾಡಿದರು. 40 ವರ್ಷಗಳಿಂದಲೂ ಇದೇ ವ್ಯಾಪಾರ ಮಾಡುತ್ತಿದ್ದಾರೆ. ಅವರದೇ ಆದ ಖಾಯಂ ಗ್ರಾಹಕರನ್ನು ಹೊಂದಿದ್ದಾರೆ. ಹರಳೆಣ್ಣೆಗೆ ಸಾಕಷ್ಟು ಬೇಡಿಕೆ ಇದೆ. ಪ್ರತಿದಿನ 100ರಿಂದ 200 ಲೀಟರ್‌ವರೆಗೂ ಹರಳೆಣ್ಣೆ ವ್ಯಾಪಾರ ಆಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ದುಪ್ಪಟ್ಟು ವ್ಯಾಪಾರ ಎಂದು ಹೇಳುತ್ತಾರೆ ಚಂದ್ರಶೇಖರ್.ಚಂದ್ರಶೇಖರ್ ಹರಳೆ ಬೀಜವನ್ನು ನೇರವಾಗಿ ರೈತರಿಂದ ಖರೀದಿಸುತ್ತಾರೆ. ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆ ಕೊಟ್ಟು ಕೊಳ್ಳುತ್ತಾರೆ. ಒಂದು ಕೆಜಿ ಹರಳಿಗೆ 65 ರುಪಾಯಿಗಳು. ಒಂದು ಲೀಟರ್ ಹರಳೆಣ್ಣೆ ತೆಗೆಯಲು 3 ಕೆಜಿ ಹರಳು ಬೇಕಾಗುತ್ತದೆ. ಪ್ರಸ್ತುತ 220 ರುಪಾಯಿಗೆ ಒಂದು ಲೀಟರ್ ಶುದ್ಧ ಹರಳೆಣ್ಣೆ ದೊರೆಯುತ್ತದೆ.
ಹರಳೆಣ್ಣೆ ತೆಗೆಯುವ ಬಗೆ:ಹರಳನ್ನು ಗಾಣದಲ್ಲಿ ಹಾಕಿ 30 ನಿಮಿಷ ಗಾಣ ತಿರುಗಿಸಿ ಹಸಿ ಎಣ್ಣೆ ಸಂಗ್ರಹಿಸಲಾಗುವುದು. ಎಣ್ಣೆ ಬರಲು ಗಾಣಕ್ಕೆ ನೀರು ಹಾಕಲಾಗುವುದು. ಆದ್ದರಿಂದ ಹಸಿ ಎಣ್ಣೆಯೇ ಸಿಗುತ್ತದೆ. ಆಮೇಲೆ ಅದನ್ನು ನಾಲ್ಕು ಗಂಟೆ ಸೌದೆಯ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ಅಂದರೆ ನೀರಿನ ಅಂಶ ಆವಿ ಆಗುವವರೆಗೂ ಕುದಿಸಬೇಕು. ಬಳಿಕ ಎಣ್ಣೆ ಶುದ್ಧೀಕರಿಸಿ ಒಂದು ದಿನವೆಲ್ಲಾ ಚೆನ್ನಾಗಿ ಆರಿಸಬೇಕು. ತದನಂದ ಎಣ್ಣೆ ಬಳಸಬಹುದು. ಇದರಲ್ಲಿ ಯಾವುದೇ ರೀತಿಯ ಕಲಬೆರಿಕೆ ಇರುವುದಿಲ್ಲ ಎನ್ನುತ್ತಾರೆ ಚಂದ್ರಶೇಖರ್.
ರಾಮನಗರ, ಕನಕಪುರ, ಚನ್ನಪಟ್ಟಣ, ಬೆಂಗಳೂರು, ನೆಲಮಂಗಲ, ಹುಲಿಯೂರುದುರ್ಗ, ಕುಣಿಗಲ್, ತುಮಕೂರು ಸೇರಿದಂತೆ ದೂರದೂರುಗಳಿಂದಲೂ ಬಂದು ಹರಳೆಣ್ಣೆ ಖರೀದಿಸುತ್ತಾರೆ. ಇತ್ತೀಚೆಗೆ ರೈತರು ಹೈನುಗಾರಿಕೆಯಲ್ಲಿ ಹಾಲು ಕರೆಯಲು ಹರಳೆಣ್ಣೆ ಬಳಸುತ್ತಿದ್ದಾರೆ. ಹರಳೆಣ್ಣೆ ತಂಪಾದ ಕಾರಣ ತಲೆಕೂದಲಿಗೆ, ಹೊಟ್ಟೆ ನೋವಿಗೂ ಬಳಸುವುದುಂಟು.ಚಂದ್ರಶೇಖರ್ ಅವರ ಆಯಿಲ್ ಮಿಲ್‌ನಲ್ಲಿ ಶುದ್ಧ ಗಾಣದ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ, ಹುಚ್ಚಳ್ಳು ಎಣ್ಣೆ ಮಾರಾಟ ಮಾಡಲಾಗುತ್ತದೆ. ಹೆಚ್ಚಾಗಿ ಹರಳೆಣ್ಣೆ ಮತ್ತು ಕೊಬ್ಬರಿ ಎಣ್ಣೆ ಮಾರಾಟವಾಗುತ್ತದೆ.
ಮಾಗಡಿಗೆ ಹರಳೆಣ್ಣೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಈ ಹೆಸರನ್ನು ಉಳಿಸಿಕೊಳ್ಳಲು ಕುಟುಂಬದ ಸದಸ್ಯರು ಇದೇ ವೃತ್ತಿಯಲ್ಲಿ ತೊಡಗಿಕೊಂಡಿದ್ದೇವೆ. ಇಬ್ಬರು ಸಹಾಯಕರು ಕೆಲಸ ಮಾಡುತ್ತಾರೆ. ಗ್ರಾಹಕರಿಗೆ ಶುದ್ಧವಾದ ಎಣ್ಣೆ ಪೂರೈಸುವುದೇ ಗುರಿ ಎನ್ನುತ್ತಾರೆ ಚಂದ್ರಶೇಖರ್.