ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಉಡುಪಿ ಜಿಲ್ಲೆ ಇದರ 2026-27ನೇ ಸಾಲಿನ ತ್ರೈಮಾಸಿಕ ಪ್ರಥಮ ಸಭೆ ಬ್ರಹ್ಮಗಿರಿಯ ಪ್ರಗತಿ ಸೌಧ ಸಭಾಂಗಣದಲ್ಲಿ ನೆರವೇರಿತು.ಸಭೆಯ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಜಿಲ್ಲಾ ಸಂಘಟನಾ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಷಡ್ಯಂತ್ರ ನಡೆಸಲು ನೂರಾರು ಕೋಟಿ ರು. ವ್ಯವಹಾರ ನಡೆದಿದೆ ಎನ್ನುವುದು ಆತಂಕಕಾರಿ ವಿಷಯ. ಈ ಷಡ್ಯಂತ್ರ, ಸಂಚು ಮಾಡಿದವರಿಗೆ ಶಿಕ್ಷೆಯಾಗಬೇಕು. ಜೊತೆಗೆ ಎಸ್‌ಐಟಿ ತನಿಖಾ ವರದಿಯನ್ನು ಕೂಡಲೇ ಬಹಿರಂಗಪಡಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.
ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್ ಉದ್ಘಾಟಿಸಿ ಜನಜಾಗೃತಿ ವೇದಿಕೆಯ ಸಮಾಜಮುಖಿ ಕಾರ್ಯ ವೈಖರಿಗಳು ಶ್ಲಾಘನೀಯ ಎಂದು ಶುಭ ಹಾರೈಸಿದರು.ನೂತನವಾಗಿ ಆಯ್ಕೆಯಾದ ತಾಲೂಕು ವೇದಿಕೆ ಅಧ್ಯಕ್ಷ ರಾಜು ಪೂಜಾರಿ ಉಡುಪಿ, ವೃಷಭರಾಜ್ ಕಡಂಬ ಕಾರ್ಕಳ, ಪ್ರಸಾದ್ ಹೆಗ್ಡೆ ಬ್ರಹ್ಮಾವರ, ಸುಬ್ರಹ್ಮಣ್ಯ ಶೆಟ್ಟಿ ಕುಂದಾಪುರ, ಸತ್ಯೇಂದ್ರ ಪೈ ಕಾಪು, ವಾದಿರಾಜ ಶೆಟ್ಟಿ ಹೆಬ್ರಿ ಅವರನ್ನು ಅಭಿನಂದಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೇದಿಕೆಯ ಸದಸ್ಯರಾದ ಗೀತಾಂಜಲಿ ಸುವರ್ಣ, ಸುಜಾತ ಸುವರ್ಣ, ಸುಧಾಕರ ಕರ್ಕೇರ, ಸುಲೇಖಾ ಶೆಟ್ಟಿ, ತಾರನಾಥ ಶೆಟ್ಟಿ ಅವರನ್ನು ಗೌರವಿಸಲಾಯಿತು. ಜಿಲ್ಲಾ ವೇದಿಕೆಗೆ ನೂತನ ಸದಸ್ಯರಾಗಿ ಅಪ್ಪಣ್ಣ ಹೆಗ್ಡೆ ಅವರ ಪುತ್ರ ರಾಮಕಿಶನ್ ಹೆಗ್ಡೆ ಅವರನ್ನು ಸೇರ್ಪಡೆಗೊಳಿಸಲಾಯಿತು.ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಕರಾವಳಿ ಪ್ರಾದೇಶಿಕ ವಿಭಾಗದ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು. ಉಡುಪಿ ಯೋಜನಾಧಿಕಾರಿ ಸುರೇಂದ್ರ ನಾಯ್ಕ ಸ್ವಾಗತಿಸಿ, ಬ್ರಹ್ಮಾವರ ಯೋಜನಾಧಿಕಾರಿ ರಮೇಶ್ ವಂದಿಸಿದರು.