ಹೊಸ ಅಪರಾಧಿಕ ಕಾನೂನುಗಳನ್ನು ರದ್ದು ಪಡಿಸಲು ಆಗ್ರಹ

| Published : Jul 03 2024, 12:18 AM IST

ಹೊಸ ಅಪರಾಧಿಕ ಕಾನೂನುಗಳನ್ನು ರದ್ದು ಪಡಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ಹೊಸ ಅಪರಾಧಿಕ ಕಾನೂನುಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಸಂವಿಧಾನ ರಕ್ಷಣಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ದೇಶದ ಜನತೆಯ ಸಂವಿಧಾನಿಕ ಹಕ್ಕುಗಳನ್ನು ಕಸಿಯುವ ಕೇಂದ್ರ ಸರ್ಕಾರದ ಹೊಸ ಅಪರಾಧಿಕ ಕಾನೂನುಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ, ಸಂವಿಧಾನ ರಕ್ಷಣಾ ಸಮಿತಿ ಪದಾಧಿಕಾರಿಗಳು ನಗರದ ಅಂಬೇಡ್ಕರ್ ಸರ್ಕಲ್ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಮಿತಿ ಸಂಚಾಲಕ ಕರುಣಾನಿಧಿ ಮಾತನಾಡಿ, ಕೇಂದ್ರ ಸರ್ಕಾರ ಹೊಸ ಕಾನೂನುಗಳ ಹೆಸರಿನಲ್ಲಿ ಜನತೆಯ ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವ ಕಾನೂನುಗಳನ್ನು ತಂದಿದೆ. ಆರೋಪಿಗೆ ಕೋಳ ತೊಡಿಸುವುದನ್ನು ಕಾನೂನು ಬದ್ಧ ಮಾಡಿದೆ. ಜೀರೋ ಎಫ್‌ಐಆರ್ ಹಾಕುವುದಕ್ಕೆ ಅವಕಾಶ ನೀಡಿದೆ. ಅಲ್ಲದೇ, ಪ್ರಾಥಮಿಕ ವಿಚಾರಣೆಯನ್ನು ಕಾನೂನುಬದ್ಧ ಮಾಡಿದೆ. ಈ ಅರೋಪದ ಕುರಿತು ಪೊಲೀಸರು ಗಮನ ಹರಿಸುವುದಕ್ಕೆ ಬದಲಾಗಿ ಅವರು ಸಂದರ್ಭದ ಅನುಕೂಲತೆಗೆ ಅನುಗುಣವಾಗಿ ಆರೋಪಿಯ ಕಡೆ ಗಮನ ಹರಿಸುವುದನ್ನು ಶಾಸನಬದ್ಧಗೊಳಿಸಿದೆ ಎಂದರು.

ವಕೀಲರಾದ ರಾಘವೇಂದ್ರ ಕೆ. ಮಾತನಾಡಿ, ಅಪರಾಧಿಕ ಕಾನೂನುಗಳಲ್ಲಿ ದುರ್ಬಲರು ಕಾನೂನು ಸಂಘರ್ಷ ಎದುರಿಸುವುದು ತುಂಬಾ ಕಷ್ಟದ ವಿಷಯವಾಗಲಿದೆ ಎಂದರು.

ವಕೀಲರಾದ ಮಹೇಶ್ ಬಿಸಾಟಿ ಮಾತನಾಡಿ, ಮುಂಬರುವ ದಿನಗಳಲ್ಲಿ ಕಾಯ್ದೆಗಳು ವಾಪಾಸಾಗದಿದ್ದರೆ ಚಳವಳಿಯನ್ನು ತೀವ್ರಗೊಳಿಸಲಾಗುವುದು ಎಂದರು.

ಮುಖಂಡರಾದ ಭಾಸ್ಕರ್ ರೆಡ್ಡಿ, ಗೋಪಾಲ್‌, ಯಲ್ಲಾಲಿಂಗ, ರಮೇಶ್ ಕುಮಾರ್, ವಕೀಲರಾದ ಕಟಿಗಿ ಜಂಬಯ್ಯ ನಾಯಕ, ಚಾಂದ್ ಬಾಷಾ, ಮರಿಯಪ್ಪ, ಸಲೀಂ ಮತ್ತಿತರರಿದ್ದರು.