ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಶೇ.33 ಸ್ಥಾನ ಮೀಸಲಾತಿಗೆ ಒತ್ತಾಯ

| Published : Dec 26 2024, 01:04 AM IST

ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಶೇ.33 ಸ್ಥಾನ ಮೀಸಲಾತಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮೀಸಲಾತಿ ಕಾಯ್ದೆ ಜಾರಿಗೊಳಿಸಿದ ನಂತರವೇ ತಾಪಂ, ಜಿಪಂ ಚುನಾವಣೆಗಳನ್ನು ನಡೆಸಬೇಕು.

ಹೊಸಪೇಟೆ: ರಾಜಕೀಯವಾಗಿ ಹಿಂದುಳಿದ, ಅತಿ ಹಿಂದುಳಿದ ಜಾತಿಗಳಿಗೆ ಶೇ.33ರಷ್ಟು ಸ್ಥಾನ ಮೀಸಲಾತಿ ಕಾಯ್ದೆ ಜಾರಿಗೊಳಿಸಿದ ನಂತರವೇ ತಾಪಂ, ಜಿಪಂ ಚುನಾವಣೆಗಳನ್ನು ನಡೆಸಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟವು ತಹಸೀಲ್ದಾರ ಶೃತಿಗೆ ಮಂಗಳವಾರ ಮನವಿ ರವಾನಿಸಿತು.

ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ವೈ.ಯಮುನೇಶ್ ಮಾತನಾಡಿ, ರಾಜೀವ್‌ ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ ಸಂವಿಧಾನದ 73ನೇ ತಿದ್ದುಪಡಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯದಲ್ಲಿ ಪಂಚಾಯತ್ ರಾಜ್ ಕಾಯ್ದೆ 1993ರ ಮೇ 10ರಿಂದ ಜಾರಿಗೆ ಬಂದಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ “ಹಳ್ಳಿಗಳ ಉದ್ದಾರವೇ, ರಾಷ್ಟ್ರದ ಉದ್ದಾರ” ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಉದ್ದೇಶದಿಂದ ಈ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ ಎಂದರು.

ಗ್ರಾಮ, ತಾಲೂಕು ಹಾಗೂ ಜಿಪಂ ಎಂಬ ಮೂರು ಹಂತದಲ್ಲಿ ಅಧಿಕಾರ ವಿಕೇಂದ್ರಿಕರಣದ ಮೂಲಕ ಸ್ಥಳೀಯ ಮತದಾರರು ಸ್ಥಳೀಯವಾಗಿ ತಮ್ಮ ಪ್ರತಿನಿಧಿಗಳನ್ನು ಚುನಾಯಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಈ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳಿಗೆ ನಿಗದಿಪಡಿಸಿರುವ ಮೀಸಲಾತಿ ಅತ್ಯಂತ ಅವೈಜ್ಞಾನಿಕವಾಗಿದೆ. ರಾಜ್ಯದಲ್ಲಿ ಶೇ.35ರಷ್ಟಿರುವ ರಾಜಕೀಯವಾಗಿ ಅತಿ ಹಿಂದುಳಿದಿರುವ ಜಾತಿಗಳಿಗೆ ಅತ್ಯಲ್ಪ ಮೀಸಲಾತಿ ನೀಡಿರುವುದು ನ್ಯಾಯೋಚಿತವಲ್ಲ. ಈ ಅಂಶವನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್‌ ತೀರ್ಪಿನಂತೆ ರಾಜ್ಯದಲ್ಲೂ ನ್ಯಾ.ಕೆ.ಭಕ್ತವತ್ಸಲಂ ಆಯೋಗದ ವರದಿಯಂತೆ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಕ್ಕೆ ಶೇ.33ರಷ್ಟು ಮೀಸಲಾತಿ ಕಾಯ್ದೆ ಜಾರಿಗೊಳಿಸಬೇಕು. ಬಳಿಕವೇ ತಾಪಂ, ಜಿಪಂ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಯು.ಆಂಜನೇಯಲು, ಪ್ರೊ.ಉಮಾಮಹೇಶ್ವರ್, ಪಂಪಣ್ಣ, ವೆಂಕೋಬಪ್ಪ, ಈ.ಕುಮಾರ ಸ್ವಾಮಿ, ಈ.ರಾಘವೇಂದ್ರ, ಸಣ್ಣಮಾರೆಪ್ಪ, ಪರಮೇಶ್, ಕೆ.ಶ್ರೀನಿವಾಸ್, ಎಂ.ಕೆ.ಬಾಷಾ, ಕೆ.ತಿಪ್ಪೇಸ್ವಾಮಿ, ಬಿ.ವಿರುಪಾಕ್ಷಪ್ಪ, ಐಲಿ ಸಿದ್ದಣ್ಣ, ಯು.ಅಶ್ವತ್ಥಪ್ಪ, ಬೋಜರಾಜೇಂದ್ರ, ರವಿಕುಮಾರ್, ಎ.ಮರಿಯಪ್ಪ, ರಾಮನಮಲಿ, ಶಂಕ್ರಪ್ಪ, ಎಸ್.ಟಿ. ಮುಂಡರಗಿ, ಮನೋಹರ್ ಮತ್ತಿತರರಿದ್ದರು.

ಹೊಸಪೇಟೆಯಲ್ಲಿ ವಿಜಯನಗರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟವು ತಹಸೀಲ್ದಾರ ಶೃತಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿಪತ್ರ ರವಾನಿಸಿತು.