ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. 5ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಬಳ್ಳಾರಿ: ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. 5ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲೆಯ ಗಡಿಗೆ ಹೊಂದಿರುವ ಆಂಧ್ರಪ್ರದೇಶದ ವಿವಿಧೆಡೆಯ ಕನ್ನಡಪರ ಮುಖಂಡರು ಜಿಲ್ಲಾಡಳಿತ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಗಡಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
1956ರ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ಸಂದರ್ಭದಲ್ಲಿ ಅಚ್ಚ ಕನ್ನಡ ಮಾತನಾಡುವ ಈ ಪ್ರದೇಶಗಳು ಅನಿವಾರ್ಯವಾಗಿ ಆಂಧ್ರಪ್ರದೇಶಕ್ಕೆ ಸೇರ್ಪಡೆಯಾದವು. ಭೌಗೋಳಿಕವಾಗಿ ನಾವು ಬೇರೆ ರಾಜ್ಯದಲ್ಲಿದ್ದರೂ, ಸಾಂಸ್ಕೃತಿಕವಾಗಿ ಮತ್ತು ಭಾವನಾತ್ಮಕವಾಗಿ ಇಂದಿಗೂ ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇವೆ. ಪ್ರಸ್ತುತ ಈ ಭಾಗಗಳಲ್ಲಿ 65ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿದ್ದು, ಸುಮಾರು 12,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡವನ್ನೇ ಉಸಿರಾಗಿಸಿಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ದುರಾದೃಷ್ಟವಶಾತ್ ಈ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ಉದ್ಯೋಗದ ವಿಷಯದಲ್ಲಿ ತೀವ್ರ ತಾರತಮ್ಯ ಎದುರಿಸುತ್ತಿದ್ದಾರೆ. ಮೀಸಲಾತಿ ಕೊರತೆಯಿಂದ 10ನೇ ತರಗತಿಯ ನಂತರ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬರುವ ನಮ್ಮ ಮಕ್ಕಳಿಗೆ "ಹೊರನಾಡು ಕನ್ನಡಿಗರು " ಅಥವಾ "ಕರ್ನಾಟಕೇತರರು " ಎಂಬ ಹಣೆಪಟ್ಟಿ ಹಚ್ಚಿ, ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶ ನಿರಾಕರಿಸಲಾಗುತ್ತಿದೆ. ಇದರಿಂದಾಗಿ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಭವಿಷ್ಯದ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕದ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಾಗ ನಮ್ಮ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಅಲ್ಲದೆ, ಇವರಿಗೆ ಸರ್ಕಾರಿ ವಸತಿ ನಿಲಯಗಳಲ್ಲಿ ಪ್ರವೇಶ ಮತ್ತು ವಿದ್ಯಾರ್ಥಿ ವೇತನದ ಸೌಲಭ್ಯ ಸಿಗುತ್ತಿಲ್ಲ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಭದ್ರತೆ ಇಲ್ಲದ ಕಾರಣ ಪೋಷಕರು ಅನಿವಾರ್ಯವಾಗಿ ಮಕ್ಕಳನ್ನು ಬೇರೆ ಭಾಷಾ ಮಾಧ್ಯಮಗಳಿಗೆ ಸೇರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಕಳೆದ ವರ್ಷವೊಂದರಲ್ಲೇ ಆದೋನಿಯಲ್ಲಿ 3 ಕನ್ನಡ ಶಾಲೆಗಳು ಮುಚ್ಚಲ್ಪಟ್ಟಿವೆ. ಇದು ಆಂಧ್ರದಲ್ಲಿ ಕನ್ನಡದ ಅಸ್ತಿತ್ವಕ್ಕೆ ಸಂಚಕಾರ ತಂದಿದೆ ಎಂದು ಅಳಲು ತೋಡಿಕೊಂಡರು.ಆಂಧ್ರಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕರ್ನಾಟಕದ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಕನಿಷ್ಠ ಶೇ. 5ರಷ್ಟು ಮೀಸಲಾತಿಯನ್ನು ಘೋಷಿಸಬೇಕು.
ನಮ್ಮ ರಾಜ್ಯದ (ಆಂಧ್ರಪ್ರದೇಶದ) ಕಂದಾಯ ಅಧಿಕಾರಿಗಳು ನೀಡಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪರಿಗಣಿಸಿ, ಕರ್ನಾಟಕದ ವಸತಿ ನಿಲಯಗಳಲ್ಲಿ ಪ್ರವೇಶ ಹಾಗೂ ವಿದ್ಯಾರ್ಥಿ ವೇತನ ನೀಡಬೇಕು. ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಗಣಿತ, ವಿಜ್ಞಾನ ಮತ್ತು ಕನ್ನಡ ಶಿಕ್ಷಕರ ಕೊರತೆ ಇದ್ದು, ಕರ್ನಾಟಕ ಸರ್ಕಾರದ ವತಿಯಿಂದಲೇ ಅತಿಥಿ ಶಿಕ್ಷಕರನ್ನು ನೇಮಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯ ಶಿಕ್ಷಕರು ಮತ್ತು ಕನ್ನಡ ಸಂಘದ ಸದಸ್ಯರಾದ ಜಿ. ದೊಡ್ಡಬಸಪ್ಪ, ಎಚ್.ಎಂ. ಶಾಂತವೀರ ಮೂರ್ತಿ, ಪಿ. ಕಬೀರ್ ಸಾಬ್, ಡಿ. ರಾಮದಾಸ್, ಜೆ. ಗವಿಸಿದ್ದಪ್ಪ,ಜೆ. ಮಂಜುನಾಥ, ಡಿ. ಸಿದ್ದನಗೌಡ, ಕೆ.ಆರ್.ನಾಗರಾಜ ಶೆಟ್ಟಿ, ಅನಂತಪುರ ಜಿಲ್ಲೆಯ ಶಿಕ್ಷಕರ ಸಂಘದ ಎಂ. ಗಿರಿಜಾಪತಿ, ಈರಾಳಪ್ಪ, ಡಿ. ದೇವರಾಜ ನಾಯಕ್, ಜಿ. ಬಸಣ್ಣ, ಜಿ. ತಿಪ್ಪೇಸ್ವಾಮಿ, ಎಂ. ಶಶಿಧರ, ಹೊನ್ನೂರಪ್ಪ, ಗಂಜಿ ಪಂಪಾಪತಿ, ಅಯ್ಯಣ್ಣ, ಶ್ರೀನಾಥ್, ನಾಗರಾಜ್, ಶ್ರೀರಾಮ್ ವೀರೇಶ್ , ವೀರೇಶ್, ಕೃಷ್ಣ ನಾಯಕ, ಹನುಮಂತಪ್ಪ ಸೇರಿದಂತೆ ಬಳ್ಳಾರಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಕರ್ನೂಲು ಹಾಗೂ ಅನಂತಪುರ ಜಿಲ್ಲೆಯ ಆಲೂರು, ಆದೋನಿ, ರಾಯದುರ್ಗ ಹಾಗೂ ಮಡಕಶಿರ ತಾಲೂಕುಗಳ ಕನ್ನಡ ಸಂಘದ ಮುಖಂಡರು ಹಾಗೂ ಕನ್ನಡಪರ ಹೋರಾಟಗಾರರು ಇದ್ದರು.