ಡಾ. ನಾಗಲಕ್ಷ್ಮಿ ಚೌಧರಿ ಅವರು, ಮುಂಡಗೋಡ ತಾಲೂಕಿನ ಸಮಸ್ಯೆಗಳ ಕುರಿತು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮೊಬೈಲ್ ಮೂಲಕ ಕರೆ ಮಾಡಿ, ಸ್ಥಳೀಯ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ, ಸಾಧ್ಯವಾದಷ್ಟು ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಂಡಗೋಡ: ತಾಲೂಕಿನ ಗ್ರಾಮೀಣ ಭಾಗದ ಮಹಿಳೆಯರು, ಕಿಶೋರಿಯರು ಹಾಗೂ ಮಕ್ಕಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಪರಿಹಾರಕ್ಕಾಗಿ ಸಿಸಿಎಫ್ ಲೊಯೋಲ ಜನಸ್ಫೂರ್ತಿ ಸ್ವ- ಸಹಾಯ ಸಂಘಗಳ ಟ್ರಸ್ಟ್ ಹಾಗೂ ಹಾವೇರಿ ಮತ್ತು ಮುಂಡಗೋಡ ತಾಲೂಕು ಸ್ವ- ಸಹಾಯ ಗುಂಪುಗಳ ಒಕ್ಕೂಟದ ಪದಾಧಿಕಾರಿಗಳ ನಿಯೋಗವು ಬೆಂಗಳೂರಿಗೆ ತೆರಳಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರನ್ನು ಭೇಟಿ ಮಾಡಿ ಸಮಗ್ರ ಮನವಿ ಸಲ್ಲಿಸಿದೆ.

ಮುಂಡಗೋಡ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು, ಕಿಶೋರಿಯರು ಮತ್ತು ಮಕ್ಕಳು ಎದುರಿಸುತ್ತಿರುವ ಆರೋಗ್ಯ, ಉದ್ಯೋಗ, ಆರ್ಥಿಕ ಸ್ವಾವಲಂಬನೆ, ಸಾರಿಗೆ, ಮೂಲ ಸೌಕರ್ಯ, ಶಿಕ್ಷಣ ಹಾಗೂ ಮಕ್ಕಳ ರಕ್ಷಣೆಗೆ ಸಂಬಧಿಸಿದ ಸಮಸ್ಯೆಗಳನ್ನು ನಿಯೋಗದವರು ಅಧ್ಯಕ್ಷರ ಗಮನಕ್ಕೆ ತಂದರು.

ನಿಯೋಗದ ಮನವಿಯನ್ನು ಆಲಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು, ಮುಂಡಗೋಡ ತಾಲೂಕಿನ ಸಮಸ್ಯೆಗಳ ಕುರಿತು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮೊಬೈಲ್ ಮೂಲಕ ಕರೆ ಮಾಡಿ, ಸ್ಥಳೀಯ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ, ಸಾಧ್ಯವಾದಷ್ಟು ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದರು.

ಈ ಸಂದರ್ಭದಲ್ಲಿ ಸಿಸಿಎಫ್ ಲೊಯೋಲ ಜನಸ್ಫೂರ್ತಿ ಟ್ರಸ್ಟ್ ಅಧ್ಯಕ್ಷೆ ಸರೋಜಾ ಚವ್ಹಾಣ, ಶಾಂತಾ ಬಡಂಗಕರ, ಲಲಿತಾ ಲಮಾಣಿ, ಗೀತಾ ರಾಠೋಡ್, ರೇಣುಕಾ ಕಿರ್ತಪ್ಪನವರ, ಅಂಜನಾ ತಹಶೀಲ್ದಾರ, ಮಾಲಾಶ್ರೀ ಚವ್ಹಾಣ ಸವಿತಾ ಅವನಿ, ಭಾರತಿ ಬಂಡಿವಡ್ಡರ, ಮಲ್ಲಮ್ಮ ನಿರಲಗಿ, ನಕುಲಬಾಯಿ ಕೊಟ್ರೆ, ಜಯಾ ಬಾಜಾರೆ, ಫಾ. ಜೆಸನ್ ಪಾಯಸ್, ಫಾ. ಜೇಸನ್ ಎನ್ವೆಂಟ್ ಸೇರಿದಂತೆ ಹಾವೇರಿ ಮತ್ತು ಮುಂಡಗೋಡ ತಾಲೂಕು ಸ್ವ- ಸಹಾಯ ಗುಂಪುಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು..