ರೈತರಿಗೆ ಹೆಕ್ಟೇರ್‌ಗೆ 50 ಸಾವಿರ ರು. ಪರಿಹಾರ ನೀಡಲು ಆಗ್ರಹ

| Published : Sep 02 2025, 01:00 AM IST

ರೈತರಿಗೆ ಹೆಕ್ಟೇರ್‌ಗೆ 50 ಸಾವಿರ ರು. ಪರಿಹಾರ ನೀಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಹೆಕ್ಟೇರ್‌ಗೆ 50 ಸಾವಿರ ರು. ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕ ಆಗ್ರಹಿಸಿದೆ.

ಬೀದರ್: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಹೆಕ್ಟೇರ್‌ಗೆ 50 ಸಾವಿರ ರು. ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕ ಆಗ್ರಹಿಸಿದೆ.

ಈ ಕುರಿತು ಕರವೇ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ನಿಯೋಗದಲ್ಲಿ ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಸಲ್ಲಿಸಿ, ಭಾರಿ ಮಳೆಯಿಂದ ಸಂಪೂರ್ಣ ಬೆಳೆ ನಾಶವಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರ ಪರಿಹಾರದ ಹಣ ರೈತರ ಖಾತೆಗೆ ನೇರವಾಗಿ ಜಮಾ ಮಾಡಬೇಕು. ಹಿಂಗಾರು ಹಂಗಾಮಿಗೆ ಕಡಲೆ, ಗೋಧಿ, ಕುಸುಬೆ, ಜೋಳದ ಬೀಜಗಳನ್ನು ಉಚಿತವಾಗಿ ವಿತರಿಸಬೇಕು ಎಂದರು.

ಮಳೆಯಲ್ಲಿ ಜಾನುವಾರುಗಳು ಕೊಚ್ಚಿ ಹೋಗಿದ್ದು, ಅವುಗಳ ಮಾಲೀಕರಿಗೆ ಪರಿಹಾರ ಕೊಡಬೇಕು. ಮನೆ ಕಳೆದುಕೊಂಡವರಿಗೆ ವಸತಿ ಇಲಾಖೆಯಿಂದ ಮನೆ ಮಂಜೂರು ಮಾಡಬೇಕು. ಫಲಾನುವಿಗಳಿಗೆ ಮುಂಗಡವಾಗಿ 30 ಸಾವಿರ ರು. ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಮಳೆಯಿಂದ ರಸ್ತೆಗಳು ಹಾಳಾದ ಕಾರಣ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರು. ಅನುದಾನ ಬಿಡುಗಡೆ ಮಾಡಬೇಕು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಶೇ 30 ರಷ್ಟು ಹೆಚ್ಚಿನ ಅನುದಾನ ಕಲ್ಪಿಸಬೇಕು ಎಂದರು.

ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ನಿಯೋಗದ ನೇತೃತ್ವ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ ಸಜ್ಜನ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ, ಪ್ರಮುಖರಾದ ಶಿವರುದ್ರ ತೀರ್ಥ, ವಿನಾಯಕ ರೆಡ್ಡಿ, ಉದಯಕುಮಾರ ಅಷ್ಟೂರೆ, ಮಲ್ಲಿಕಾರ್ಜುನ ಸಿಕೇನಪುರೆ ಮತ್ತಿತರರು ಇದ್ದರು.