ಸಾರಾಂಶ
ಸಿದ್ದಾಪುರ: ಪಟ್ಟಣದ ಪಪಂ ಸಭಾಭವನದಲ್ಲಿ ಆಡಳಿತಾಧಿಕಾರಿ, ತಹಸೀಲ್ದಾರ್ ಮಧುಸೂದನ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಪಪಂ ಸಾಮಾನ್ಯ ಸಭೆ ನಡೆಯಿತು. ಈ ವೇಳೆ ಆಸ್ತಿ ನೋಂದಣಿಯನ್ನು ಸರಳೀಕರಣ ಮಾಡುವಂತೆ ಸದಸ್ಯರು ಆಗ್ರಹಿಸಿದರು.ಹಿರಿಯ ಸದಸ್ಯ ಕೆ.ಜಿ. ನಾಯ್ಕ ಹಣಿಜೀಬೈಲ್ ಮಾತನಾಡಿ, ಪಪಂ ಅಧಿಕಾರಿಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆರೋಪಗಳು ಬರುತ್ತಿದ್ದು, ಏಜೆಂಟರರ ಮೂಲಕ ಬಂದರೆ ಮಾತ್ರ ಪಪಂ ಕೆಲಸವಾಗುತ್ತದೆ ಎಂದು ಹೇಳಲಾಗುತ್ತಿದೆ. ಕೆಲವು ನೌಕರರ ವರ್ತನೆ ಅದೇ ರೀತಿಯಲ್ಲಿದೆ ಎಂದು ಆರೋಪಿಸಿದರು.ಪಪಂ ವ್ಯಾಪ್ತಿಯಲ್ಲಿ ೪೫೦೦ಕ್ಕಿಂತ ಹೆಚ್ಚು ಖಾಸಗಿ ಆಸ್ತಿಗಳಿವೆ. ಆದರೆ ಪಪಂ ದಾಖಲೆಯಲ್ಲಿ ಕೇವಲ ೧೩೦೦ ಆಸ್ತಿಗಳಿವೆ. ಉಳಿದ ಆಸ್ತಿಗಳ ಆದಾಯ ಪಪಂಗೆ ಬರುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿಯ ನೌಕರರ ವರ್ತನೆ. ಯಾರಾದರೂ ಆಸ್ತಿ ನೋಂದಣಿ ಬಗ್ಗೆ ಬಂದರೆ ಇಲ್ಲದ ಕಾನೂನನ್ನು ತೋರಿಸಿ ಪುನಃ ಅವರು ಪಪಂಗೆ ಬರದಂತೆ ಮಾಡುತ್ತಾರೆ. ಅವರು ಅಕ್ರಮ ಕಟ್ಟಡ ಕಟ್ಟಿಕೊಂಡು ವಾಸ ಮಾಡುತ್ತಾರೆ. ಹೀಗಾದರೆ ಪಪಂಗೆ ಆದಾಯ ಹೇಗೆ ಬರುತ್ತದೆ? ಇದನ್ನು ತಪ್ಪಿಸಬೇಕಾದರೆ ಪಪಂಗೆ ಬರುವ ಸಾರ್ವಜನಿಕರಿಗೆ ಸರಿಯಾದ ತಿಳಿವಳಿಕೆ ನೀಡಿ ಆಸ್ತಿ ನೋಂದಣಿ ಸರಳವಾಗುವಂತೆ ಮಾಡಬೇಕು.
ಫಾರಂ ನಂ. ೩ ಬಗ್ಗೆ ಸಾಕಷ್ಟು ಗೊಂದಲವಿದೆ. ಆದರೆ ಕೆಲವರಿಗೆ ಸುಲಭವಾಗಿ ಆಗುತ್ತದೆ. ಇದು ಜನರ ಸಂಶಯಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಬೇಕು ಎಂದು ಕೆ.ಜಿ. ನಾಯ್ಕ ಹೇಳಿದರು.ಪಪಂಗೆ ಕೆಲವು ವ್ಯಕ್ತಿಗಳು ಬರುತ್ತಾರೆ. ಅವರು ತಾವು ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದ್ದೇವೆ. ನಮ್ಮದು ಸಮಾಜಸೇವೆ ಎಂದು ಹೇಳುತ್ತಾರೆ. ನಾವು ಸಾಕಷ್ಟು ಬಾರಿ ಅವರಿಗೆ ಹೇಳಿದ್ದೇವೆ. ಆದರೂ ಪ್ರಯೋಜನವಿಲ್ಲವಾಗಿದೆ ಎಂದು ಪಪಂ ಅಧಿಕಾರಿ ತಿಳಿಸಿದರು.ಬೀದಿದೀಪಗಳ ಅಳವಡಿಕೆ ಹಾಗೂ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿದೆ. ಅವರು ಸರ್ವೆ ನಡೆಸಲು ಬಂದಾಗ ಅವರಿಗೆ ಹಾಲಿ ಇರುವ ಬೀದಿದೀಪಗಳ ಬಗ್ಗೆ ಮಾಹಿತಿ ನೀಡದೆ ಹಿಂದಿನ ಮಾಹಿತಿ ನೀಡಲಾಗಿದೆ. ಹಾಲಿ ೧೫೯೪ ಬೀದಿದೀಪಗಳಿವೆ. ಅವರ ಸರ್ವೆ ಪ್ರಕಾರ ೧೩೭೨ ಎನ್ನುತ್ತಾರೆ. ಉಳಿದ ದೀಪಗಳ ನಿರ್ವಹಣೆ ಯಾರು ಮಾಡಬೇಕು? ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದರೆ ಇಂತಹ ಪರಿಸ್ಥಿತಿಗಳು ಉದ್ಭವಿಸುತ್ತದೆ ಎಂದು ಸದಸ್ಯರು ಕಿಡಿಕಾರಿದರು.ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ನಾಯ್ಕ, ಸದಸ್ಯರಾದ ಗುರುರಾಜ ಶಾನಭಾಗ, ವಿನಯ ಹೊನ್ನೆಗುಂಡಿ, ರವಿಕುಮಾರ ನಾಯ್ಕ, ನಂದನ ಬೋರ್ಕರ್, ವೆಂಕೋಬಾ, ಯಶೋದಾ ಮಡಿವಾಳ, ಕವಿತಾ ಹೆಗಡೆ, ಚಂದ್ರಕಲಾ ನಾಯ್ಕ, ರಾಧಿಕಾ ಕಾನಗೋಡ, ಪಪಂ ಮುಖ್ಯಾಧಿಕಾರಿ ಜೆ.ಆರ್. ನಾಯ್ಕ ಉಪಸ್ಥಿತರಿದ್ದರು.