ಸಾರಾಂಶ
ಕೊಪ್ಪಳ: ನ್ಯಾಯಮೂರ್ತಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ವಕೀಲರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ಆಗ್ರಹಿಸಿದೆ.
ಗುರುವಾರ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ಸುಪ್ರೀಂ ಕೋರ್ಟ್ ಮುಖ್ಯ ಮ್ಯಾಯಮೂರ್ತಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ವಕೀಲರಾಕೇಶ್ ಕಿಶೋರ್, ಕೋರ್ಟ್ ಕಲಾಪದ ವೇಳೆ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಭಾರತದ ಸಂವಿಧಾನ,ನ್ಯಾಯಾಂಗ ವ್ಯವಸ್ಥೆ ಮತ್ತು ಕಾನೂನಿನ ಮೇಲೆ ಅಪಾರ ಗೌರವವಿರುವ ಪ್ರಜೆಗಳಾಗಿ ಮನವಿ ಮೂಲಕ ಗಮನಕ್ಕೆ ತರುತ್ತಿದ್ದೇವೆ.ಈ ಘಟನೆಯು ವ್ಯಕ್ತಿಗತ ಅವಮಾನವಲ್ಲ,ಇದು ಭಾರತದ ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆ ಶ್ರೇಷ್ಠತೆಯ ವಿರುದ್ಧ ನಡೆದ ತೀವ್ರ ಅವಮಾನವಾಗಿದೆ. ಸಂವಿಧಾನದ ಗೌರವ ಮತ್ತು ನ್ಯಾಯದ ನಿಲುವಿಗೆ ಗಂಭೀರ ಬೆದರಿಕೆ. ಕೋರ್ಟ್‌ನೊಳಗೆ ಇಂತಹ ವರ್ತನೆಗಳು ಸಾರ್ವಜನಿಕರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆ ಇದೆ.
ವಕೀಲ ರಾಕೇಶ್ ಕಿಶೋರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ನ್ಯಾಯಾಂಗ ಸಂಸ್ಥೆಗಳ ಗೌರವ ಮತ್ತು ಶಿಸ್ತು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತಕ್ಷಣದ ಹಾಗೂ ಗಂಭೀರ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆ ಪುನರಾವರ್ತನೆ ಆಗದಂತೆ ಸರ್ಕಾರ ಮಟ್ಟದಲ್ಲಿ ನೀತಿ ರೂಪಿಸಬೇಕೆಂದು ಶಿಫಾರಸು ಮಾಡಬೇಕು.ಭಾರತವು ಕಾನೂನಿನ ಗೌರವಿಸುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಈ ವ್ಯವಸ್ಥೆಯ ವಿರುದ್ಧ ಇಂತಹ ಅಸಭ್ಯ ಹಾಗೂ ಅಪಮಾನಕಾರಿ ನಡೆಗಳನ್ನು ಖಂಡಿಸಬೇಕು ಹಾಗೂ ಕಾನೂನಿನ ಪ್ರಕಾರ ಸೂಕ್ತವಾಗಿ ಶಿಕ್ಷಿಸಬೇಕೆಂಬುದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರಾಣೇಶ ಪೂಜಾರ, ಅಧ್ಯಕ್ಷ ಮಂಜುನಾಥ ಮ್ಯಾಗಳಮನಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಛಲವಾದಿ, ಹೇಮಣ್ಣ ಕವಲೂರು, ನಾಗರಾಜ ನಾಯಕ ಡೊಳ್ಳಿನ, ಬಾಳಪ್ಪ ಕಾಳೆ,ಪರಶುರಾಮ ಭಾವಿ, ಮೋಹನ, ಚಂದ್ರಕಾಂತ ದೇವರ ಮನಿ, ಗವಿಸಿದ್ದಪ್ಪ ಹೊಸಮನಿ, ಅಂದಪ್ಪ ಬಳೂಟಗಿ, ಕೃಷ್ಣಮೂರ್ತಿ, ಶಂಕರ ಚಾಗಿ, ಕೃಷ್ಣ ರಾಠೋಡ ಮತ್ತಿತರರು ಉಪಸ್ಥಿತರಿದ್ದರು.