ಕೈಗೆಟಕುವ ದರದಲ್ಲಿ ಯೂರಿಯಾ ಗೊಬ್ಬರ ಪೂರೈಸಲು ಆಗ್ರಹ

| Published : Aug 05 2025, 12:30 AM IST

ಸಾರಾಂಶ

ಈ ವರ್ಷದ ಮುಂಗಾರು ಮಳೆ ಬೇಗ ಪ್ರಾರಂಭವಾಗಿ ರೈತರು ಭೂಮಿಯ ಹದ ನೋಡಿಕೊಂಡು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ. ರೈತರ ಬೆಳೆ ಅತಿವೃಷ್ಟಿ, ಅನಾವೃಷ್ಟಿಯನ್ನು ದಾಟಿ ಕೈಗೆ ಬರಬೇಕೆಂದರೆ ಸಾಹಸವೇ ಸರಿ. ಅದರಲ್ಲೂ ಇಂದಿನ ಪ್ರಸಕ್ತ ವಾತಾವರಣದ ಏರುಪೇರು ರೈತರ ಜೀವನವನ್ನೇ ಬರಡಾಗಿಸಿದೆ.

ಧಾರವಾಡ: ರಾಜ್ಯದ ರೈತರಿಗೆ ಕೈಗೆಟಕುವ ದರದಲ್ಲಿ ಈ ಕೂಡಲೇ ಅಗತ್ಯವಿರುವಷ್ಟು ಯೂರಿಯಾ ಗೊಬ್ಬರ ಸರಬರಾಜು ಮಾಡಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆಯು ಸೋಮವಾರ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಮತ್ತು ಪ್ರದಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ, ಈ ವರ್ಷದ ಮುಂಗಾರು ಮಳೆ ಬೇಗ ಪ್ರಾರಂಭವಾಗಿ ರೈತರು ಭೂಮಿಯ ಹದ ನೋಡಿಕೊಂಡು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ. ರೈತರ ಬೆಳೆ ಅತಿವೃಷ್ಟಿ, ಅನಾವೃಷ್ಟಿಯನ್ನು ದಾಟಿ ಕೈಗೆ ಬರಬೇಕೆಂದರೆ ಸಾಹಸವೇ ಸರಿ. ಅದರಲ್ಲೂ ಇಂದಿನ ಪ್ರಸಕ್ತ ವಾತಾವರಣದ ಏರುಪೇರು ರೈತರ ಜೀವನವನ್ನೇ ಬರಡಾಗಿಸಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಾಲ ಮಾಡಿ ಈ ಬಾರಿಯೂ ರಾಜ್ಯದಾದ್ಯಂತ ಕೃಷಿ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಸರಿಯಾದ ಸಮಯಕ್ಕೆ ಅಗತ್ಯವಿದ್ದಷ್ಟು ಯೂರಿಯಾ ಗೊಬ್ಬರವನ್ನು ಸರಬರಾಜು ಮಾಡಬೇಕಿರುವುದು ಕರ್ತವ್ಯ. ದುರಂತವೆಂದರೆ ರೈತರ ಬಗ್ಗೆ ಸರ್ಕಾರ ಪ್ರತಿ ವರ್ಷವೂ ಇದೇ ರೀತಿಯ ತಾತ್ಸಾರ ತೋರುತ್ತಿದೆ ಎಂದರು.

ಗೊಬ್ಬರದ ಕೊರತೆಯ ಸಮಸ್ಯೆ ಏಕಾಏಕಿ ಬಂದಿಲ್ಲ, ಕೇಂದ್ರ ಬಿಜೆಪಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂ ಕೂಡ ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಮಾಡುತ್ತಿದ್ದು, ತಂದೆ- ತಾಯಿಗಳ ಜಗಳದಲ್ಲಿ ಕೂಸು ಬಡವಾದಂತೆ ರೈತನ ಬದುಕು ಬಡವಾಗುತ್ತಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಶರಣು ಗೋನವರ ಮಾತನಾಡಿ, ವರ್ಷಕ್ಕೆ ಎಷ್ಟು ಗೊಬ್ಬರ ಬೇಕು, ಯಾವ ಸಮಯದಲ್ಲಿ ಬೇಕು ಎಂಬ ಕನಿಷ್ಠ ತಿಳುವಳಿಕೆ ಇಲ್ಲದೆ ಹೋದರೆ ಕೃಷಿ ಇಲಾಖೆ ಇದ್ದರೂ ಏನು ಪ್ರಯೋಜನ. ಕೊಪ್ಪಳ ಜಿಲ್ಲೆಯ ರೈತನೋರ್ವ ಗೊಬ್ಬರಕ್ಕೆ ಕಾದು ಕಾದು ಸಿಗದಿದ್ದಾಗ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದು ಸಮಸ್ಯೆಯ ಆಳವನ್ನು ತೋರಿಸುತ್ತದೆ ಎಂದರು.

ಪ್ರತಿಭಟನೆಯಲ್ಲಿ ಗೋವಿಂದ್ ಕೃಷ್ಣಪ್ಪನವರ್ ಸೇರಿದಂತೆ ಸಂಘಟನೆ ಪದಾಧಿಕಾರಿಗಳಿದ್ದರು.