ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯ

| Published : Jan 24 2025, 12:46 AM IST

ಸಾರಾಂಶ

ಕೇಂದ್ರ ಸರ್ಕಾರ ಉಂಡೆ ಕೊಬ್ಬರಿಗೆ ಒಂದು ಕೆಜಿಗೆ ಕೇವಲ ಒಂದು ರುಪಾಯಿ ಹೆಚ್ಚಿಸಿ ತೆಂಗು ಬೆಳೆಗಾರರಿಗೆ ಮತ್ತು ರೈತರಿಗೆ ಅವಮಾನ ಮಾಡಿರುವುದಲ್ಲದೆ ಈ ಬಗ್ಗೆ ಹತ್ತು ಹಲವು ಹೋರಾಟ ಮತ್ತು ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗುತ್ತಿಲ್ಲ ಎಂದು ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಕೇಂದ್ರ ಸರ್ಕಾರ ಉಂಡೆ ಕೊಬ್ಬರಿಗೆ ಒಂದು ಕೆಜಿಗೆ ಕೇವಲ ಒಂದು ರುಪಾಯಿ ಹೆಚ್ಚಿಸಿ ತೆಂಗು ಬೆಳೆಗಾರರಿಗೆ ಮತ್ತು ರೈತರಿಗೆ ಅವಮಾನ ಮಾಡಿರುವುದಲ್ಲದೆ ಈ ಬಗ್ಗೆ ಹತ್ತು ಹಲವು ಹೋರಾಟ ಮತ್ತು ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗುತ್ತಿಲ್ಲ ಎಂದು ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ್ ಆಕ್ರೋಶ ವ್ಯಕ್ತಪಡಿಸಿದರು. ನಗರದ ಆಡಳಿತಸೌಧದ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಪ್ರಾಂತ ರೈತ ಸಂಘ, ಜನಸ್ಪಂದನ ಟ್ರಸ್ಟ್ ವತಿಯಿಂದ ಗುರುವಾರ ಉಂಡೆ ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು ಹಾಗೂ ಈ ವರ್ಷ ಕೇವಲ 1 ರುಪಾಯಿ ಹೆಚ್ಚಿಸಿರುವುದನ್ನು ವಾಪಸ್ ಪಡೆಯಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು.

ಉಂಡೆ ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕೆಂದು ಕೊಬ್ಬರಿ ಬೆಳೆಗಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯ ಪೂರ್ವಕ ಮನವಿಗಳನ್ನು ವಿವಿಧ ಹಂತಗಳಲ್ಲಿ ಹೋರಾಟ ಮಾಡಿ ಸಲ್ಲಿಸಿದ್ದರೂ ಇದ್ಯಾವುದನ್ನೂ ಪರಿಗಣಿಸದೆ ಕೇಂದ್ರ ಸರ್ಕಾರ 2024-25ನೇ ಸಾಲಿಗೆ ಉಂಡೆ ಕೊಬ್ಬರಿಯ ಬೆಂಬಲ ಬೆಲೆಯನ್ನು ಒಂದು ಕೆಜಿಗೆ ರು. 120 ಇದ್ದ ಹಾಲಿ ಬೆಂಬಲ ಬೆಲೆಗೆ ಕೇವಲ 1 ರು. ಹೆಚ್ಚಿಸಿ ರು.121 ಮಾಡಿ ತೆಂಗು ಬೆಳೆಗಾರರು ಹಾಗೂ ರೈತ ಸಮುದಾಯಕ್ಕೆ ಅವಮಾನ ಮಾಡಿದೆ. ಈ ಬಗ್ಗೆ ತುಮಕೂರು ಲೋಕಸಭಾ ಸದಸ್ಯರೂ ಹಾಗೂ ಕೇಂದ್ರ ರೈಲ್ವೆ ಮಂತ್ರಿಗಳಾದ ಸೋಮಣ್ಣನವರು ಹಾಗೂ ಕೇಂದ್ರ ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿಯವರಿಗೆ ತಿಳಿಸಿ ಈ ಬಗ್ಗೆ ಕೇಂದ್ರ ಸರ್ಕಾರ ತುರ್ತು ಪರಿಶೀಲಿಸಿ ಬೆಂಬಲ ಬೆಲೆಯನ್ನು ವೈಜ್ಞಾನಿಕವಾಗಿ ಹೆಚ್ಚಿಸಬೇಕು. ಕೇವಲ ಒಂದು ರು. ಹೆಚ್ಚಿಸಿ ತೆಂಗು ಬೆಳೆಗಾರರಿಗೆ ನಿಮ್ಮ ಸರ್ಕಾರ ಈ ರೀತಿ ಅನ್ಯಾಯ ಮಾಡಬಾರದು ಎಂದು ಮನವಿ ಮಾಡಿದ್ದರೂ ಈವರೆಗೂ ಅವರು ಯಾವುದೇ ಕ್ರಮ ತೆಗೆದುಕೊಳ್ಳದೆ ಬೆಳೆಗಾರರ ಜೊತೆ ನಿಂತಿಲ್ಲದಿರುವುದು ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದೇ ರೀತಿ ರಾಜ್ಯ ಸರ್ಕಾರದ ಜವಾಬ್ದಾರಿಯೂ ಹೆಚ್ಚಿದ್ದು ಈ ಬಗ್ಗೆ ರಾಜ್ಯ ಸರ್ಕಾರದ ಕೃಷಿ, ತೋಟಗಾರಿಕೆ ಸಚಿವರುಗಳಿಗೆ ಮನವಿ ಮಾಡಿದ್ದರೂ ಇವರೂ ಸಹ ಕೇಂದ್ರದ ಜೊತೆ ಮಾತನಾಡಿ ಬೆಳೆಗಾರರಿಗೆ ಆಗಿರುವ ಅವಮಾನವನ್ನು ಸರಿಪಡಿಸಿ ಬೆಂಬಲ ಬೆಲೆಯನ್ನು ಸರಿಯಾಗಿ ಹೆಚ್ಚಿಸಲು ಒತ್ತಡ ಹಾಕುತ್ತಿಲ್ಲ. ಅಲ್ಲದೆ ಕೊಬ್ಬರಿ ಸೇರಿದಂತೆ ಯಾವುದೇ ಬೆಳೆಗಳ ಬೆಂಬಲ ಬೆಲೆಯನ್ನು ನಿರ್ಧರಿಸುವಲ್ಲಿ ಸಮಾನ ಜವಾಬ್ದಾರಿ ಹೊತ್ತಿರುವ ಕೇಂದ್ರದ ವಿರೋಧ ಪಕ್ಷವು ಸಹ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡದೆ ಅತ್ತ ಕೇಂದ್ರದ ಮೇಲೆ ಒತ್ತಡವನ್ನೂ ಹಾಕದೆ ಮೌನ ವಹಿಸುರುವುದು ರೈತರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದರು. ರೈತ ಸಂಘದ ತಾ. ಅಧ್ಯಕ್ಷರಾದ ಜಯಾನಂದಯ್ಯ, ಮುಖಂಡರಾದ, ದೇವಾನಂದ್, ಲಿಂಗರಾಜು, ಸಂಗಮೇಶ್, ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ, ರೈತ ಸಂಘದ ಯೋಗೀಶ್ವರಸ್ವಾಮಿ, ಸಿಐಟಿ ಸುಬ್ರಹ್ಮಣ್ಯ ಮುಂತಾದವರು ಮಾತನಾಡಿ, ತೆಂಗು ಬೆಳೆಗಾರರ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸ್ವಲ್ಪವೂ ಕಾಳಜಿ ಇಲ್ಲದಂತಾಗಿದೆ. ರೈತರನ್ನು ಮುಗಿಸುವ ಹುನ್ನಾರದಿಂದ ಕೇಂದ್ರ ಸರ್ಕಾರ ರೈತರನ್ನು ಕಡೆಗಣಿಸುತ್ತಿದ್ದು ಕೊಬ್ಬರಿಗೆ ವೈಜ್ಞಾನಿಕ ಬೆಲೆ ನೀಡುವಲ್ಲಿ ಮೀನಮೇಷ ಎಣಿಸುತ್ತಿದೆ. ಒಂದು ಕ್ವಿಂಟಲ್ ಕೊಬ್ಬರಿ ಬೆಳೆಯಲು 18 ಸಾವಿರ ಹೆಚ್ಚು ಖರ್ಚು ಬರುತ್ತಿದ್ದು, ಕೇಂದ್ರ ಸರ್ಕಾರ ಕೇವಲ 12100 ರು.ಗಳನ್ನು ಬೆಂಬಲ ಬೆಲೆಯಾಗಿ ನಿಗದಿಪಡಿಸಿದ್ದು ಇದು ಬಹುದೊಡ್ಡ ಅನ್ಯಾಯವಾಗಿದ್ದು ಬೆಂಬಲ ಬೆಲೆಯನ್ನು 20 ಸಾವಿರ ರು.ಗೆ ಏರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಗೆ ವಕೀಲರ ಸಂಘ, ನಿವೃತ್ತ ನೌಕರ ಸಂಘ, ಎಪಿಎಂಸಿ ಹಮಾಲರ ಸಂಘ, ಕಸಾಪ, ಸೌಹಾರ್ದ ತಿಪಟೂರು, ವಿದ್ಯುತ್ ಗುತ್ತಿಗೆದಾರರ ಸಂಘ, ಅಹಿಂದ ರೈತ ಸಂಘಟನೆ ಸೇರಿದಂತೆ ಇತರೆ ಸಂಘ ಸಂಸ್ಥೆಗಳು ಸೇರಿದಂತೆ ತಿಮ್ಲಾಪುರ ದೇವರಾಜು, ಶ್ರೀಕಾಂತ್ ಕೆಳಹಟ್ಟಿ, ರಾಜಮ್ಮ, ಗುರುಮೂರ್ತಿ, ಕೆ.ಎಂ. ರಾಜಣ್ಣ, ಅಲ್ಲಭಕಾಶ್, ಅನುಸೂಯಮ್ಮ, ಮತ್ತಿತರರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ನೂರಾರು ಸಂಖ್ಯೆಯಲ್ಲಿ ರೈತರು, ತೆಂಗು ಬೆಳೆಗಾರರು ಭಾಗವಹಿಸಿದ್ದರು. ಬಾಕ್ಸ್‌..

ಹೋರಾಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಉಂಡೆ ಕೊಬ್ಬರಿಗೆ ಬೆಂಬಲ ಬೆಲಯಾಗಿ ಹೆಚ್ಚಿಸಿರುವ ಕೇವಲ 1 ರುಪಾಯಿ ಹೆಚ್ಚಿಸಿರುವುದನ್ನು ವಿರೋಧಿಸಲು ಮತ್ತು ಕೇಂದ್ರಕ್ಕೆ ವಾಪಸ್ ಕಳುಹಿಸಲು ವಾಟರ್‌ಕ್ಯಾನ್ ಒಂದಕ್ಕೆ ಭಾಗವಹಿಸಿದ್ದ ರೈತರು 1 ರುಪಾಯಿ ನಾಣ್ಯವನ್ನು ಹಾಕುತ್ತಿದ್ದರು.