ಪಪ್ಪಾಯಿ ಬೆಳೆನಾಶ ಪಡಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ಅಮಾನತಿಗೆ ಆಗ್ರಹ

| Published : Sep 23 2024, 01:28 AM IST

ಸಾರಾಂಶ

ಸಾಗುವಳಿ ಜಮೀನಿನಲ್ಲಿ ಪಪ್ಪಾಯಿ ಬೆಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶ ಪಡಿಸಿದ್ದು ಹಾಗೂ ತಾಲೂಕಿನ ಅರಣ್ಯ ಭೂಮಿ ಖಾಸಗಿವರು ಪಾಲಾಗುತ್ತಿದನ್ನು ರಕ್ಷಿಸಬೇಕೆಂದು ಒತ್ತಾಯ

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ತಾಲೂಕಿನ ದೇವರಬೂಪುರ ಗ್ರಾಮದ ರೈತರು ಬೆಳೆದ ಪಪ್ಪಾಯಿ ಬೆಳೆ ನಾಶ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕೆಂದು ಆಗ್ರಹಿಸಿ ಪ್ರಾದೇಶಿಕ ಆಯುಕ್ತ ಕೃಷ್ಣಾ ಭಾಜಪೇಯಿಗೆ ರೈತ ಸಂಘದವರು ಮನವಿ ಸಲ್ಲಿಸಿದರು.

ಲಿಂಗಸುಗೂರ ಪ್ರವಾಸಿ ಮಂದಿರದಲ್ಲಿ ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಬಳ್ಳಾರಿಗೆ ತೆರಳುವಾಗ ಭೇಟಿಯಾದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವುಪುತ್ರಪ್ಪ ನಂದಿಹಾಳ, ತಾಲೂಕಿನ ದೇವರಭೂಪೂರ ಗ್ರಾಮದ ಅಮರೇಶ್ವರ ಹತ್ತಿರ ಸಾಗುವಳಿ ಜಮೀನಿನಲ್ಲಿ ಪಪ್ಪಾಯಿ ಬೆಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶ ಪಡಿಸಿದ್ದು ಹಾಗೂ ತಾಲೂಕಿನ ಅರಣ್ಯ ಭೂಮಿ ಖಾಸಗಿವರು ಪಾಲಾಗುತ್ತಿದನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು.

ಅಮರೇಶ್ವರ ದೇವಸ್ಥಾನ ಹಿಂದೆ ಸಾಗುವಳಿ ಜಮೀನಲ್ಲಿ 9 ಎಕರೆ 26 ಗುಂಟೆಯಲ್ಲಿ ಬೆಳೆದ ಪಪ್ಪಾಯಿ ಬೆಳೆಯನ್ನು ಅರಣ್ಯ ಇಲಾಖೆಯ ಜಮೀನಿನೆಂದು ವಲಯ ಅರಣ್ಯ ಅಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪಪ್ಪಾಯಿ ಬೆಳೆ ಸಂಪೂರ್ಣ ನಾಶ ಮಾಡಿದ್ದು, ಅಂದಾಜು 30 ಲಕ್ಷ ರು. ಹಾನಿಯಾಗಿದೆ. ಅರಣ್ಯ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಪರಿಹಾರ ನೀಡಬೇಕು, ಬೆಳೆ ಹಾನಿ ಸಮೀಕ್ಷೆ ಸರಿಯಾದ ರೀತಿಯಲ್ಲಿ ಮಾಡದೆ ರೈತರಿಗೆ ಅನ್ಯಾಯ ಮಾಡಲಾಗಿದ್ದು ಕಾರಣ ಪುನಃ ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ಮಾಡಿಸಬೇಕೆಂದು ಆಗ್ರಹಿಸಿದರು.

ಸಹಾಯಕ ಅಯುಕ್ತ ಬಸವಣಪ್ಪ ಕಲಶೆಟ್ಟಿ, ತಹಸೀಲ್ದಾರ್‌ ಎನ್.ಶಂಶಾಲಂ, ಕಂದಾಯ ನಿರೀಕ್ಷಕ ರಾಮಕೃಷ್ಣ ನಾಯಕ ಹಾಗೂ ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಸಾದ ರೆಡ್ಡಿ ಸೇರಿದಂತೆ ಇದ್ದರು.