ಹೊಸನಗರ ತಹಸೀಲ್ದಾರ್‌ ಅಮಾನತಿಗೆ ಒತ್ತಾಯ

| Published : Jul 03 2025, 11:46 PM IST / Updated: Jul 03 2025, 11:47 PM IST

ಸಾರಾಂಶ

ಕಾನೂನುಬಾಹಿರವಾಗಿ ರೈತರ ತೋಟ ನಾಶಪಡಿಸಿದ ಹೊಸನಗರ ತಹಸೀಲ್ದಾರ್ ಅವರನ್ನು ಅಮಾನತುಗೊಳಿಸಬೇಕು ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ. ಶ್ರೀನಿವಾಸ್ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾನೂನುಬಾಹಿರವಾಗಿ ರೈತರ ತೋಟ ನಾಶಪಡಿಸಿದ ಹೊಸನಗರ ತಹಸೀಲ್ದಾರ್ ಅವರನ್ನು ಅಮಾನತುಗೊಳಿಸಬೇಕು ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ. ಶ್ರೀನಿವಾಸ್ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹೊಸನಗರ ತಾಲೂಕು ಹಸವೆ ಗ್ರಾಮದ ಸ.ನಂ. 17 ರಲ್ಲಿ ಶ್ರೀಧರ್ ಎಂಬುವವರು 5 ಎಕರೆ ಜಮೀನು ಮಂಜೂರಿಗೆ ಫಾರಂ ನಂ. 53 ರಲ್ಲಿ ಅರ್ಜಿ ಸಲ್ಲಿಸಿದ್ದರು. ಇದು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುತ್ತದೆ. ಹಾಗೆಯೇ ಫಾರಂ ನಂ. 57ರಲ್ಲಿ ಅರ್ಜಿ ಸಲ್ಲಿಸಿದ್ದು, ಇದು ಹೊಸನಗರ ತಾಲೂಕು ಕಚೇರಿಯಲ್ಲಿ ಬಾಕಿ ಇರುತ್ತದೆ. ಆದರೂ ಕೂಡ ಹೊಸನಗರ ತಹಸೀಲ್ದಾರ್ ಅವರು ಮೇ. 28 ರಂದು ಬೆಳಗ್ಗೆ 11 ಗಂಟೆಗೆ ಏಕಾಏಕಿ ಯಾವುದೇ ತಿಳಿವಳಿಕೆ ನೀಡದೇ 7 ವರ್ಷದ 1600 ಅಡಕೆ ಗಿಡಗಳನ್ನು ನಾಶಪಡಿಸಿದ್ದಾರೆ. ಅಲ್ಲದೇ, ಗೃಹಪಯೋಗಿ ವಸ್ತುಗಳನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಕೂಡ ದೂರು ನೀಡಲಾಗಿದೆ ಎಂದರು.

ತಹಸೀಲ್ದಾರ್ ಅವರು ಕಾನೂನುಬಾಹಿರವಾಗಿ ರೈತರ ತೋಟವನ್ನು ನಾಶ ಮಾಡಿದ್ದಾರೆ. ಎಷ್ಟೋ ಬಾರಿ ವಿಪರೀತ ಮಳೆ ಬರುತ್ತಿರುವ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದರೆ ಪರಿಹಾರ ನೀಡಬೇಕಾದವರು ನಾಶಪಡಿಸಿದ್ದು ಎಷ್ಟರಮಟ್ಟಿಗೆ ಸರಿ? ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ತನಿಖೆ ನಡೆಸಿ ವರದಿ ಕೊಡುವಂತೆ ತಿಳಿಸಿದ್ದರೂ ಕೂಡ ಇದುವರೆಗೂ ಯಾವ ಕ್ರಮವನ್ನೂ ಕೂಡ ಕೈಗೊಂಡಿಲ್ಲ ಎಂದರು.

ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಕೂಡ ರೈತರ ಮೇಲಾಗಿರುವ ದೌರ್ಜನ್ಯವನ್ನು ಖಂಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಡಿಸಿಯವರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಆದರೂ ಕೂಡ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕೂಡಲೇ ತಹಸೀಲ್ದಾರ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ರೈತ ಶ್ರೀಧರ್ ಮಾತನಾಡಿ, ನನಗೆ ತುಂಬಾ ಅನ್ಯಾಯವಾಗಿದೆ. ಬೆಳೆದು ನಿಂತ ತೋಟ ನಾಶಪಡಿಸಲಾಗಿದೆ. ಈ ಬಗ್ಗೆ ರೈತರು ಹೊಸನಗರ ತಾಲೂಕು ಕಚೇರಿ ಎದುರು ಅಮರಣಾಂತ ಉಪವಾಸ ಕೈಗೊಂಡಿದ್ದರು. ಅಲ್ಲಿ ಕೆಲವರು ಅಸ್ವಸ್ಥರಾಗಿದ್ದರೂ ಕೂಡ ಇಷ್ಟೆಲ್ಲಾ ಹೋರಾಟ ಮಾಡಿದ್ದರೂ ತೋಟ ನಾಶಪಡಿಸಿದ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಡಿಸಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದರು.

ಗೋಷ್ಠಿಯಲ್ಲಿ ವಸವೆ ಗ್ರಾಮದ ಪ್ರಮುಖರಾದ ಭಾಸ್ಕರ್, ವಿಠ್ಠಲ್, ಅಂಜನ್, ಜಯರಾಮಶೆಟ್ಟಿ, ವೀರಪ್ಪ, ರೇಣುಕೇಶ್, ರವಿ ಮಾಸ್ತಿಕಟ್ಟೆ ಇದ್ದರು.