ಕಸಾಪ ರಾಜ್ಯಾಧ್ಯಕ್ಷರ ಅಮಾನತಿಗೆ ಆಗ್ರಹ

| Published : Apr 16 2025, 12:37 AM IST

ಸಾರಾಂಶ

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಡಿ.ಮಂಜುನಾಥ್ ಅವರ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಲು ಮುಂದಾಗಿರುವ ಕ್ರಮ ಖಂಡಿಸಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರನ್ನು ಅಮಾನತ್ತು ಮಾಡಿ ಆಡಳಿತಾಧಿಕಾರಿ ನೇಮಿಸುವಂತೆ ಆಗ್ರಹಿಸಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಿತೈಷಿಗಳು, ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಡಿ.ಮಂಜುನಾಥ್ ಅವರ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಲು ಮುಂದಾಗಿರುವ ಕ್ರಮ ಖಂಡಿಸಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರನ್ನು ಅಮಾನತ್ತು ಮಾಡಿ ಆಡಳಿತಾಧಿಕಾರಿ ನೇಮಿಸುವಂತೆ ಆಗ್ರಹಿಸಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಿತೈಷಿಗಳು, ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಂಸ್ಕೃತಿಯ ಪ್ರಾತಿನಿಧಿಕ ಸಂಸ್ಥೆಯಾಗಿದೆ. ೧೧೪ ವರ್ಷಗಳಿಂದ ನಿರಂತರವಾಗಿ ಕನ್ನಡ ನಾಡು ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಸ್ಪಂದಿಸುತ್ತಾ ಬಂದಿದೆ. ಆದರೆ ನಾಡೋಜ ಮಹೇಶ್ ಜೋಶಿಯವರು ಕೇಂದ್ರ ಪರಿಷತ್ ಅಧ್ಯಕ್ಷರಾದ ನಂತರ ಕನ್ನಡಿಗರ ಹೆಮ್ಮೆಯ ಈ ಸಂಸ್ಥೆಯು ಸ್ವರೂಪವನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಈ ಕಾರಣ ಅವರನ್ನು ಅಮಾನತು ಮಾಡಬೇಕು ಮತ್ತು ಆಡಳಿತ ಅಧಿಕಾರಿಯನ್ನು ನೇಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಬೈಲಾ ತಿದ್ದುಪಡಿ ಮಾಡಿ ಪ್ರಮುಖ ವಿಷಯಗಳ ಬಗ್ಗೆ ನಿರ್ಣಯ ಮಾಡುವ ಅಧಿಕಾರವನ್ನು ಕಾರ್ಯಕಾರಿ ಸಮಿತಿಗೆ ನೀಡುವ ಬದಲು ಕೇಂದ್ರ ಸಮಿತಿ ಅಧ್ಯಕ್ಷರಿಗೆ ನೀಡುವ ಮೂಲಕ ಅವರು ಹುನ್ನಾರ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. ಸರ್ವ ಸದಸ್ಯರ ಸಭೆಯನ್ನು ಏ.೨೭ ರಂದು ಕರೆದಿದ್ದಾರೆ ಅದನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನೀಡದೆ ಜಿಲ್ಲಾ, ತಾಲೂಕು, ಹೋಬಳಿ ಸಾಹಿತ್ಯ ಸಮ್ಮೇಳನಗಳಿಗೆ ನೆರವು ನೀಡದೆ ಸಾಹಿತ್ಯ ಕ್ಷೇತ್ರ ಅವನತಿಗೆ ಕಾರಣವಾಗುತ್ತಿದ್ದು, ಅವುಗಳಿಗೆ ಸಮರ್ಪಕ ಅನುದಾನಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್ ಅವರು ಚುನಾಯಿತ ಅಧ್ಯಕ್ಷರಾಗಿದ್ದು, ಯಾವುದೇ ಕಾರಣಕ್ಕೂ ಅವರನ್ನು ಅಮಾನುತು ಮಾಡುವುದಾಗಾಲಿ, ಸದಸ್ಯತ್ವ ರದ್ದು ಮಾಡಲು ಬರುವುದಿಲ್ಲ. ಇದನ್ನು ನ್ಯಾಯಾಲಯ ಕೂಡ ಒಪ್ಪುವುದಿಲ್ಲ. ಆದರೆ ಕ್ಷುಲ್ಲಕ ಕಾರಣ ನೀಡಿ ಅವರ ವಿರುದ್ಧ ನೋಟಿಸ್ ನೀಡಿರುವುದು ಅಮಾನೀಯವಾದದ್ದು, ಅವರ ಷಡ್ಯಂತ್ರಕ್ಕೆ ತಡೆ ನೀಡಬೇಕು ಮತ್ತು ಇಂತಹ ಸರ್ವಾಧಿಕಾರಿ ಧೋರಣೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕತೆಗಾರ ಕು.ವೀರಭದ್ರಪ್ಪ, ಪ್ರಮುಖರಾದ ಕೆ.ಪಿ.ಶ್ರೀಪಾಲ್, ಚಂದ್ರೇಗೌಡ ಬಿ., ಶಂಕರಘಟ್ಟ ರಮೇಶ್, ಹುಚ್ರಾಯಪ್ಪ, ರಮೇಶ್‌ಶೆಟ್ಟಿ, ಹೊನ್ನಾಳ್ಳಿ ಚಂದ್ರಶೇಖರ್, ಅಕ್ಷತಾ ಹುಂಚದಕಟ್ಟೆ, ಕೆ.ಎಲ್.ಅಶೋಕ್, ಜಿ.ಡಿ.ಮಂಜುನಾಥ್, ರಾಮಚಂದ್ರ, ಶೇಖರ್‌ಗೌಳೇರ್, ರತ್ನಯ್ಯ, ರಘು ಶಿಕಾರಿಪುರ, ನಾಗರಾಜ್, ಶಿವಲಿಂಗಪ್ಪ, ಮೋಹನ್‌ಶೆಟ್ಟಿ, ಬಿ.ಡಿ.ರವಿ, ಕೃಷ್ಣಮೂರ್ತಿ, ಟಿ.ಕೃಷ್ಣಪ್ಪ, ಡಾ.ಶಾಂತಾ ಸುರೇಂದ್ರ, ಭಾರತೀ ರಾಮಕೃಷ್ಣ, ಮೈನಾವತಿ, ಶಶಿಕಲಾ ಪ್ರಶಾಂತ್, ಡಾ.ಗುರುದತ್ತ್, ನಾರಾಯಣ, ಶ್ರೀನಿವಾಸಗೌಡ, ಲಲಿತಮ್ಮ, ಸುಶೀಲಾ ಷಣ್ಮುಗಮ್ಮ, ಆನಂದ ಸೇರಿದಂತೆ ಹಲವರಿದ್ದರು.

ಜೋಶಿ ಅವರ ಲೆಕ್ಕಪತ್ರ

ವ್ಯವಹಾರಗಳನ್ನು ತನಿಖೆ ನಡೆಸಿ

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಬೈಲಾ ತಿದ್ದುಪಡಿ ಮಾಡಿ ಮಹೇಶ ಜೋಶಿ ಸರ್ವಾಧಿಕಾರಿ ಆಗಲು ಹೊರಟಿದ್ದಾರೆ. ಇದು ಅತ್ಯಂತ ಅಪಾಯಕಾರಿ ನಡೆ ಎಂದು ಸಾಹಿತಿ ನಾಡೋಜ ಕುಂ.ವೀರಭದ್ರಪ್ಪ ಟೀಕಿಸಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಡಿ.ಮಂಜುನಾಥ್ ಅವರ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಲು ಮುಂದಾಗಿರುವ ಕ್ರಮ ಖಂಡಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಬೇಕು. ಪರಿಷತ್ತಿನ ರಾಜ್ಯ ಘಟಕ ಅಧ್ಯಕ್ಷ ಮಹೇಶ ಜೋಶಿ ಅವರ ಲೆಕ್ಕಪತ್ರ ವ್ಯವಹಾರಗಳನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಡಿ.ಮಂಜುನಾಥ ಅವರ ಸದಸ್ಯತ್ವ ಮೊಟಕುಗೊಳಿಸುವ ನಿರ್ಧಾರ ಸರಿಯಲ್ಲ. ತಮ್ಮ ತಪ್ಪಗಳನ್ನು ಪ್ರಶ್ನಿಸುವವರ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂತಹ ಕ್ರಮ ಖಂಡನೀಯ. ಇದರ ವಿರುದ್ಧ ನಾಡಿನ ಎಲ್ಲ ಸಾಹಿತ್ಯಾಭಿಮಾನಿಗಳು ಮಾತಾಡಬೇಕು ಎಂದರು.

ಸಾಹಿತಿ ಬಿ.ಚಂದ್ರೇಗೌಡ ಮಾತನಾಡಿ, ಮಂಡ್ಯ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರ ಮಹೇಶ್ ಜೋಶಿ ಕೊಟ್ಟಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯಿಂದ ಜಿಲ್ಲಾ ಹಾಗೂ ತಾಲೂಕು ಸಮಿತಿಗಳಿಗೆ ಅನುದಾನ ಹಂಚಿಕೆ ಆಗುತ್ತಿಲ್ಲ. ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.