ಆರೋಪಿ ಮಹಮ್ಮದ್ ಹುಸೇನ್‌ಗೆ ಎಡಭಾಗದ ಸಯಾಟಿಕ ಇರುವುದು ಕಂಡುಬಂದಿರುತ್ತದೆ ಎಂದು ಹೇಳಿದ್ದಾರೆ. ಆದರೆ, ಈ ಸಯಾಟಿಕ ಸಮಸ್ಯೆ ಕಂಡುಬಂದಿದ್ದರೆ ಅದಕ್ಕೆ ಪೂರಕವಾಗಿ ಆರೋಪಿಯ ಎಕ್ಸ್‌ರೇ ಇಲ್ಲವೇ ಎಂಆರ್‌ಐ ಪರೀಕ್ಷೆ ನಡೆಸಿರುವ ಕುರಿತು ಯಾವುದೆ ಪ್ರಸ್ತಾವವನ್ನು ತಮ್ಮ ಲಿಖಿತ ಉತ್ತರದಲ್ಲಿ ಶಿವಕುಮಾರ್ ದಾಖಲಿಸಿರುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಿಮ್ಸ್‌ನಲ್ಲಿ ಕಾರಾಗೃಹ ಆರೋಪಿಗೆ ಅನಕೃತವಾಗಿ ಚಿಕಿತ್ಸೆ ನೀಡಿ ದ್ವಂದ್ವ ಹೇಳಿಕೆ ನೀಡುತ್ತಿರುವ ವೈದ್ಯಕೀಯ ಅಧಿಕ್ಷಕ ಡಾ. ಶಿವಕುಮಾರ್ ಅವರನ್ನು ಅಮಾನತ್ತುಗೊಳಿಸಿ ಇಲಾಖಾ ತನಿಖೆ ನಡೆಸುವಂತೆ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ದೂರು ದಾಖಲಿಸಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ನೀಡಿರುವ ಲಿಖಿತ ಪ್ರತಿಕ್ರಿಯೆಯಲ್ಲಿ ಆರೋಪಿ ಮಹಮ್ಮದ್ ಹುಸೇನ್‌ಗೆ ಎಡಭಾಗದ ಸಯಾಟಿಕ ಇರುವುದು ಕಂಡುಬಂದಿರುತ್ತದೆ ಎಂದು ಹೇಳಿದ್ದಾರೆ. ಆದರೆ, ಈ ಸಯಾಟಿಕ ಸಮಸ್ಯೆ ಕಂಡುಬಂದಿದ್ದರೆ ಅದಕ್ಕೆ ಪೂರಕವಾಗಿ ಆರೋಪಿಯ ಎಕ್ಸ್‌ರೇ ಇಲ್ಲವೇ ಎಂಆರ್‌ಐ ಪರೀಕ್ಷೆ ನಡೆಸಿರುವ ಕುರಿತು ಯಾವುದೆ ಪ್ರಸ್ತಾವವನ್ನು ತಮ್ಮ ಲಿಖಿತ ಉತ್ತರದಲ್ಲಿ ಶಿವಕುಮಾರ್ ದಾಖಲಿಸಿರುವುದಿಲ್ಲ ಎಂದು ದೂರಿದರು.

ಯಾವುದೇ ಪರೀಕ್ಷೆ ನಡೆಸದೆ ಸಯಾಟಿಕ ಸಮಸ್ಯೆ ಇದೆ ಎಂದು ವೈದ್ಯರು ಕೇವಲ ರೋಗಿಯ ಹೇಳಿಕೆಯಿಂದಲೇ ಕಂಡುಕೊಂಡರೆ?, ಆರೋಪಿಗೆ ಈ ಹಿಂದೆ ಸಯಾಟಿಕ ಸಮಸ್ಯೆ ಇದ್ದ ಬಗ್ಗೆಯೂ ಪ್ರಸ್ತಾಪವಿಲ್ಲ. ಇದಲ್ಲದೆ ಜೈಲು ವಾರ್ಡ್ ಎಂದು ಇವರು ಗುರುತಿಸಿರುವ ಕೊಠಡಿಗೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ದಿಢೀರ್ ಭೇಟಿ ನೀಡಿದ ನಂತರ ಒಂದು ಬಿಳಿ ಹಾಳೆಯಲ್ಲಿ ಜೈಲ್ ವಾರ್ಡ್ ಎಂದು ಅಂಟಿಸಲಾಗಿದೆಯೇ ವಿನಃ ಅದಕ್ಕೂ ಮೊದಲು ಈ ವಾರ್ಡ್‌ನ್ನು ಜೈಲು ವಾರ್ಡ್ ಎಂದು ಸಾರ್ವಜನಿಕವಾಗಿ ಯಾವುದೇ ನಾಮಫಲಕ ಹಾಕಿರಲಿಲ್ಲವೇಕೆ ಎಂದು ಪ್ರಶ್ನಿಸಿದರು.

ಆರೋಪಿ ಆ.೨೧ರಂದು ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿ ನಂತರ ಆ.೨೪ರಂದು ಬಿಡುಗಡೆಗೊಳಿಸಿ ಜೈಲಿಗೆ ಕಳುಹಿಸಲಾಯಿತು ಎಂದು ಹೇಳಿಕೆ ದಾಖಲಿಸಿದ್ದಾರೆ. ವಾಸ್ತವದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಕಾರದ ಸದಸ್ಯರು ಹಾಗೂ ಜಿಲ್ಲಾ ನ್ಯಾಯಾಧೀಶರು ಆಸ್ಪತ್ರೆಯ ಪರಿಶೀಲನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆಗ ಸ್ವತಃ ವೈದ್ಯಕೀಯ ಅಧೀಕ್ಷಕರು ಆರೋಪಿಗೆ ಯಾವುದೇ ಗಂಭೀರ ಖಾಯಿಲೆ ಇಲ್ಲವೆಂದು ಬಲವಂತವಾಗಿ ಇಲ್ಲಿ ದಾಖಲಾಗಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಈ ದ್ವಂದ್ವ ಹೇಳಿಕೆ ಅನುಮಾನಗಳಿಗೆ ಕಾರಣವಾಗಿದೆ. ಇಡೀ ಪ್ರಕರಣದಲ್ಲಿ ಅಧೀಕ್ಷಕ ಡಾ.ಶಿವಕುಮಾರ್ ಆರೋಪಿಯೊಂದಿಗೆ ಶಾಮೀಲಾಗಿ ಹಣ ಮತ್ತಿತರ ಪ್ರಭಾವಕ್ಕೆ ಒಳಗಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆರೋಪಿ ಅಕ್ರಮ ಎಸಗಲು ಕಾರಣರಾಗಿರುವ ಬಗ್ಗೆ ಸಂಶಯವಿದೆ ಎಂದು ಹೇಳಿದ್ದಾರೆ.

ಈ ಸನ್ನಿವೇಶದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮೌನವಹಿಸದೆ ಇಲಾಖಾ ತನಿಖೆ ನಡೆಸಬೇಕು. ನಿಷ್ಪಕ್ಷಪಾತ ತನಿಖೆ ನಡೆಯಲು ಅನುಕೂಲವಾಗುವಂತೆ ವೈದ್ಯಕೀಯ ಅಧೀಕ್ಷಕರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಎಚ್.ಡಿ.ಜಯರಾಂ, ಮಲ್ಲೇಶ್, ರಾಜ ವೆಂಕಟೇಶ್, ವೆಂಕಟೇಶ್, ಗೋವಿಂದ ರಾಜ್, ಸೋಮಶೇಖರ, ರಾಜೇಂದ್ರ ಸಿಂಗ್ ಬಾಬು ಹಾಜರಿದ್ದರು.