ನಗರದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ಸೈಲ್-ವಿಐಎಎಲ್) ತನ್ನ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್.ಆರ್) ಅಡಿಯಲ್ಲಿ ಮಹಿಳಾ ಸಬಲೀಕರಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶ ಹೊಂದಿದ್ದು, ಈ ನಿಟ್ಟಿನಲ್ಲಿ ನಿರಂತರವಾಗಿ ತನ್ನ ಬದ್ಧತೆ ಕಾಯ್ದುಕೊಂಡು ಬಂದಿದೆ ಎಂದು ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಅನೂಪ್ ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಕಾರ್ಖಾನೆಯ ಒಡಂಬಡಿಕೆಯ ಪಾಲುದಾರ ಸಂಸ್ಥೆ ಶಿವಮೊಗ್ಗ ಚೈತನ್ಯ ಗ್ರಾಮೀಣಾಭಿವೃದ್ಧಿ ಸೊಸೈಟಿ ಸಹಯೋಗದೊಂದಿಗೆ ನಗರದ ಇಸ್ಪಾತ್ ಮಹಿಳಾ ಸಮಾಜದ ಆವರಣದಲ್ಲಿ ಆರಂಭಿಸಲಾಗಿರುವ ಉಚಿತ ಮಹಿಳಾ ಟೈಲರಿಂಗ್ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಮಾ.೨೦೨೭ರ ವೇಳೆಗೆ ಆರ್ಥಿಕವಾಗಿ ಹಿಂದುಳಿದ ಕನಿಷ್ಠ ೩೦ ಮಹಿಳೆಯರಿಗೆ ಕೌಶಲ್ಯ ಆಧಾರಿತ ತರಬೇತಿ ನೀಡುವುದು, ಆ ಮೂಲಕ ಅವರು ಆರ್ಥಿಕ ಸ್ವಾವಲಂಬನೆ ಮತ್ತು ಸುಸ್ಥಿರ ಜೀವನೋಪಾಯವನ್ನು ಸಾಧಿಸಲು ಸಾಧ್ಯವಾಗುವಂತೆ ಮಾಡುವುದು ಉಚಿತ ಮಹಿಳಾ ಟೈಲರಿಂಗ್ ತರಬೇತಿ ಕೇಂದ್ರದ ಪ್ರಾಥಮಿಕ ಉದ್ದೇಶವಾಗಿದೆ ಎಂದರು.

ದೀರ್ಘಕಾಲೀನ ಸುಸ್ಥಿರತಾ ಉಪಕ್ರಮದ ಭಾಗವಾಗಿ ಮುಂದಿನ ದಿನಗಳಲ್ಲಿ ಈ ಕೇಂದ್ರವನ್ನು ಕೈಗಾರಿಕಾ ಕೈ ಗವಸುಗಳ (ಹ್ಯಾಂಡ್ ಗ್ಲೋವಸ್) ಉತ್ಪಾದನಾ ಘಟಕವಾಗಿ ಪರಿವರ್ತಿಸಲು ಯೋಜಿಸಲಾಗಿದೆ. ಈ ಉಪಕ್ರಮವು ತರಬೇತಿ ಪಡೆದ ಮಹಿಳೆಯರಿಗೆ ನಿರಂತರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಆದಾಯಗಳಿಕೆಗೆ ಅವರ ಕೌಶಲ್ಯವನ್ನು ಬಳಸಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದರು.

ಮುಖ್ಯ ಮಹಾಪ್ರಬಂಧಕ (ಮಾನವ ಸಂಪನ್ಮೂಲ) ಮತ್ತು ಸಿ.ಎಸ್.ಆರ್ ಅಪೆಕ್ಸ್ ಕಮಿಟಿ ಅಧ್ಯಕ್ಷರಾದ ಬಿ. ವಿಶ್ವನಾಥ್, ಮುಖ್ಯ ಮಹಾಪ್ರಬಂಧಕ (ಸ್ಥಾವರ) ಪ್ರಮೋದ್ ಕುಮಾರ್ ಸಿಂಗ್, ಅಧ್ಯಕ್ಷರು, ಇಸ್ಪಾತ್ ಮಹಿಳಾ ಸಮಾಜ ಅಧ್ಯಕ್ಷೆ ನಿಶಾ ಶ್ರೀವಾಸ್ತವ, ಉಪಾಧ್ಯಕ್ಷರಾದ ಪಂಕಜ ವಿಶ್ವನಾಥ್, ನೀಲಂ ಸಿಂಗ್, ಉಪಾಧ್ಯಕ್ಷರು ಹಾಗೂ ಚೈತನ್ಯ ಗ್ರಾಮೀಣಾಭಿವೃದ್ಧಿ ಸೊಸೈಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಟಿ. ಭದ್ರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಹಾಯಕ ಪ್ರಬಂಧಕ (ಮಾನವ ಸಂಪನ್ಮೂಲ) ಮತ್ತು ಸಿ.ಎಸ್.ಆರ್ ಅಪೆಕ್ಸ್ ಕಮಿಟಿ ಸಂಚಾಲಕರಾದ ಎಮ್.ಎಲ್ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.