ಪಾದಯಾತ್ರೆ ಮಾಡುವ ಮೂಲಕ ಅಡಕೆ ಬೆಳೆಗಾರರಿಗೆ ನೈತಿಕ ಬೆಂಬಲ ನೀಡುವ ಜೊತೆಗೆ ಜನಜಾಗೃತಿ ಮೂಡಿಸುವ ಮತ್ತು ಜಡ್ಡುಗಟ್ಟಿದ ಸರ್ಕಾರಕ್ಕೆ ಎಚ್ಚರಿಕೆ ಕೊಡಲಾಗಿದೆ. ಇಂತಹ ಪಾದಯಾತ್ರೆ ಮಹತ್ವವನ್ನು ತಿಳಿಯದ ಕ್ಷೇತ್ರದ ಶಾಸಕ ಬಸವರಾಜು ವಿ. ಶಿವಗಂಗಾ ಬಾಲಿಶವಾಗಿ ಮಾತನಾಡುವುದು ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯ ಲಕ್ಷಣವಲ್ಲ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದ್ದಾರೆ.

- ಶಾಸಕ ಬಸವರಾಜು ಬಾಲಿಶ ಹೇಳಿಕೆ ಜವಾಬ್ದಾರಿಯುತ ಜನಪ್ರತಿನಿಧಿ ಲಕ್ಷಣವಲ್ಲ: ಟೀಕೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಾದಯಾತ್ರೆ ಮಾಡುವ ಮೂಲಕ ಅಡಕೆ ಬೆಳೆಗಾರರಿಗೆ ನೈತಿಕ ಬೆಂಬಲ ನೀಡುವ ಜೊತೆಗೆ ಜನಜಾಗೃತಿ ಮೂಡಿಸುವ ಮತ್ತು ಜಡ್ಡುಗಟ್ಟಿದ ಸರ್ಕಾರಕ್ಕೆ ಎಚ್ಚರಿಕೆ ಕೊಡಲಾಗಿದೆ. ಇಂತಹ ಪಾದಯಾತ್ರೆ ಮಹತ್ವವನ್ನು ತಿಳಿಯದ ಕ್ಷೇತ್ರದ ಶಾಸಕ ಬಸವರಾಜು ವಿ. ಶಿವಗಂಗಾ ಬಾಲಿಶವಾಗಿ ಮಾತನಾಡುವುದು ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯ ಲಕ್ಷಣವಲ್ಲ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಪಾನ್ ಮಸಾಲ, ಗುಟ್ಕಾ ನಿಷೇಧ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ದಾವಣಗೆರೆ ವರೆಗೆ ಪಾದಯಾತ್ರೆ, ಬಿಜೆಪಿ ವತಿಯಿಂದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ನೇತೃತ್ವದ ಪಾದಯಾತ್ರೆ ಕುರಿತಂತೆ ಮಕ್ಕಳಂತೆ ಮಾತನಾಡುವ ಕ್ಷೇತ್ರದ ಶಾಸಕರು ಪಾದಯಾತ್ರೆಯ ಮಹತ್ವವನ್ನು ತಿಳಿಯಬೇಕಾಗಿದೆ ಎಂದರು.

ಈ ಹಿಂದೆ ಕಾಂಗ್ರೆಸ್ ನಾಯಕರು ಬೆಂಗಳೂರಿನಿಂದ ಬಳ್ಳಾರಿಗೆ, ಬೆಂಗಳೂರಿನಿಂದ ಮೇಕೆದಾಟು ವರೆಗೆ, ಕೇರಳದಿಂದ ದೆಹಲಿವರೆಗೆ ಪಾದಯಾತ್ರೆಯನ್ನು ಏಕೆ ಮಾಡಿದರು? ಅಡಕೆ ಬೆಳೆಗಾರ ರೈತರ ಹಿತಕಾಪಾಡುವಲ್ಲಿ ನಡೆಸಿದ ಪಾದಯಾತ್ರೆಯ ಬಗ್ಗೆ ಸಣ್ಣತನದ ಮಾತುಗಳನ್ನು ಆಡಬಾರದು ಎಂದರು.

ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಆಧುನೀಕರಣದ ಕಾಮಗಾರಿ ಕೆಲಸಕ್ಕೆ ನಾನು ಶಾಸಕನಾಗಿದ್ದ 2022ರಲ್ಲಿ ಎಸ್.ಎಫ್.ಸಿ ಯೋಜನೆಯಲ್ಲಿ ನಿಲ್ದಾಣದ ಅಭಿವೃದ್ಧಿಗೆ ₹90 ಲಕ್ಷ ಸರ್ಕಾರದಿಂದ ಮಂಜೂರಾತಿ ಮಾಡಿಸಿ ಮತ್ತು ಪಟ್ಟಣದ ಇತರೆ ಕಾಮಗಾರಿಗಳಿಗೆ ಹಣ ಮಂಜೂರು ಮಾಡಿದ್ದನ್ನು ಸೇರಿಸಿಕೊಂಡು ₹1.34 ಕೋಟಿಯಲ್ಲಿ ಆಧುನೀಕರಣ ಆಮೆಗತಿಯಲ್ಲಿ ಸಾಗುತ್ತಿದೆ. ಈ ಹಣವು ಸಾಕಾಗದೇ ನಿಲ್ದಾಣದ ನೆಲಹಾಸು ಹಾಕಲು ಹಣ ಬೇಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಹೇಳುತ್ತಾರೆ ಈ ಬಗ್ಗೆ ಪುರಸಭೆ ಸರಿಯಾದ ಲೆಕ್ಕವನ್ನು ಒದಗಿಸಬೇಕು ಎಂದು ಅಧಿಕಾರಿಗೆ ತಾಕೀತು ಮಾಡಿದರು. ನಿಲ್ದಾಣದ ಆಧುನೀಕರಣದ ಕೆಲಸ ಆರಂಭಗೊಂಡು 7 ತಿಂಗಳು ಕಳೆದಿದ್ದು, ಬೇಗನೆ ಕಾಮಗಾರಿ ಕೆಲಸವನ್ನು ಮುಗಿಸಿ ಪ್ರಯಾಣಿಕರ ಬಳಕೆಗೆ ಸಿಗುವಂತೆ ಮಾಡಲಿ ಎಂದರು.

ಉಬ್ರಾಣಿ ಏತನೀರಾವರಿ ಯೋಜನೆಗೆ ಪಂಪು- ಮೋಟಾರುಗಳ ಖರೀದಿಗಾಗಿ ₹7 ಕೋಟಿಯನ್ನು ಮಂಜೂರು ಮಾಡಿಸಿದ್ದೆ. ಅದರಲ್ಲಿ ಪಂಪುಗಳನ್ನು ಬದಲಾವಣೆ ಮಾಡಿದ್ದಾರೆ ಅಷ್ಟೇ. ಸೆಪ್ಟೆಂಬರ್ ತಿಂಗಳು ಆರಂಭಗೊಂಡರೂ ಏತನೀರಾವರಿಯ ಕೆರೆಗಳಿಗೆ ನೀರು ಹರಿಯುತ್ತಿಲ್ಲ. ಇದೊಂದು ಆಡಳಿತವೇ ಎಂದು ಲೇವಡಿ ಮಾಡಿದರು.

ನನ್ನ ಅಧಿಕಾರದಲ್ಲಿ ಆಯುಷ್ ಆಯುರ್ವೇದ ಆಸ್ಪತ್ರೆ ಕಟ್ಟಡವನ್ನು ಕಟ್ಟಿಸಿ ಉದ್ಘಾಟನೆ ಮಾಡಿದ್ದರೂ ಆಸ್ಫತ್ರೆಯನ್ನು ಇದುವರೆಗೂ ಆರಂಭಿಸಿಲ್ಲ. ₹3 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಿದ್ದರೂ ಇನ್ನು ಆರಂಭಿಸಿಲ್ಲ ಎಂದು ಅಸಮಾಧಾನವನ್ನು ವ್ಯಕ್ತ ಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮಲಹಾಳ್ ಡಿ.ಸಿ. ಕುಮಾರಸ್ವಾಮಿ, ಪಿ.ಎಲ್,ಡಿ ಬ್ಯಾಂಕ್ ಅಧ್ಯಕ್ಷ ಸತೀಶ್, ಅಣ್ಣಪ್ಪ, ಬಿ.ಎಂ. ಕುಬೇಂದ್ರೋಜಿ ರಾವ್, ಗೌ.ಹಾಲೇಶ್, ಪಟ್ಲಿನಾಗರಾಜ್, ಎಂ.ಬಿ.ರಾಜಪ್ಪ, ದಿಗ್ಗೇನಹಳ್ಳಿನಾಗರಾಜ್, ಮಾಲತೇಶ್, ಜಿ.ಕೆ.ಜಗದೀಶ್, ಸುಣಿಗೆರೆ ಕುಮಾರ್, ಬುಳ್ಳಿನಾಗರಾಜ್, ತರಕಾರಿ ಮಂಜುನಾಥ್, ಸಂಗಮೇಶ್ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.

- - -

(ಕೋಟ್‌)ನಾನು ಶಾಸಕ ಸ್ಥಾನದಿಂದ ನಿರ್ಗಮಿಸುವ ಸಂದರ್ಭದಲ್ಲಿ ಕ್ಷೇತ್ರದಲ್ಲಿ ವಿವಿಧ ಕಾಮಗಾರಿ ಕೆಲಸಗಳಿಗೆ ₹385 ಕೋಟಿ ಅನುದಾನ ಮಂಜುರಾತಿ ಮಾಡಿಸಿದ್ದೆ. ಅವೇ ಕಾಮಗಾರಿ ಕೆಲಸಗಳೇ ಈಗಲೂ ನಡೆಯುತ್ತಿವೆ. ಆದರೆ, ಈ ಸರ್ಕಾರದ ಆಡಳಿತದಲ್ಲಿ ಜನತೆಗೆ ದೊರಕಬಹುದಾದ ಮೂಲಭೂತ ಸೌಲಭ್ಯಗಳೆ ದೊರೆಯುತ್ತಿಲ್ಲ.

- ಮಾಡಾಳು ವಿರೂಪಾಕ್ಷಪ್ಪ, ಮಾಜಿ ಶಾಸಕ.

- - -

-3ಕೆಸಿಎನ್ಜಿ1: ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿದರು.