ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಗೋಹತ್ಯೆ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಕಾನೂನು ರೀತಿ ಕ್ರಮ ಕೈಗೊಳ್ಳದೆ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು ಹಿರಿಯ ಅಧಿಕಾರಿಗಳು ತನಿಖೆ ಕೈಗೊಂಡು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಇಲ್ಲಿನ ಗ್ರಾಮಾಂತರ ಠಾಣೆ ಮುಂಭಾಗ ಪ್ರತಿಭಟಿಸಿ ಸಿಪಿಐಗೆ ಮನವಿ ಸಲ್ಲಿಸಲಾಯಿತು.ಇತ್ತೀಚೆಗೆ ನಡೆದ ಬಕ್ರೀದ್ ಹಬ್ಬದಲ್ಲಿ ಶಿರಾಳಕೊಪ್ಪ ಸುತ್ತಮುತ್ತ ಸಾವಿರಾರು ಗೋವುಗಳ ಹತ್ಯೆ ಮಾಡಿ ತಂದು ಹಾಕಿರುವ ಖಲೀಜಗಳು ಮತ್ತು ಅವಶೇಷಗಳು ಕಂಡು ಬಂದಿದ್ದು, ಕಾನೂನು ವಿರೋಧಿ ಕೃತ್ಯವಾಗಿದೆ. ಜೂ.17ರಂದು ಸಾಮಾಜಿಕ ಕಾರ್ಯಕರ್ತ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ, ಪೊಲೀಸ್ ಇನ್ಸ್‌ಪೆಕ್ಟರ್ ರುದ್ರೇಶ್‌ಗೆ ಕರೆ ಮಾಡಿ, ಹಳ್ಳೂರ್ ಕೇರಿ ಸರ್ಕಲ್ ಮುಂಭಾಗದ ಜಮೀನಿನಲ್ಲಿ ಹಲವಾರು ಗೋವು ಹತ್ಯೆ ಮಾಡಿ ಖಲೀಜ ತಂದು ಹಾಕಿದ್ದಾರೆ ಎಂಬ ಮಾಹಿತಿ ನೀಡಿದಾಗ ಕೂಡಲೇ ಪಿಎಸ್‌ಐ ಸ್ಥಳಕ್ಕೆ ಕಳುಹಿಸುವುದಾಗಿ ತಿಳಿಸಿದ್ದರು. ಈ ವೇಳೆ ಅನ್ಯ ಕೋಮಿನ ಕೆಲವರು ದೇವರಾಜ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಿಪಿಐ ಹಾಗೂ ಪಿಎಸ್‌ಐ ಸ್ಥಳಕ್ಕೆ ಬಂದು ದೇವರಾಜ್‌ರನ್ನು ರಕ್ಷಿಸಿ ಶಿರಾಳಕೊಪ್ಪ ಠಾಣೆ ಜೀಪ್ [ನಂ ಕೆ.ಎ-14 ಜಿ-1194] ನಲ್ಲಿ ಕಳಿಸಿಕೊಟ್ಟಿದ್ದು ಹಲ್ಲೆ ಸಂಬಂದ ಶಿರಾಳಕೊಪ್ಪ ಠಾಣೆಯಲ್ಲಿ [0134/2024] ಪ್ರಕರಣ ಸಹ ದಾಖಲಾಗಿರುತ್ತದೆ ಮತ್ತು ನಡೆದಿರುವ ಗೋಹತ್ಯೆ ವಿಚಾರವಾಗಿ ದೇವರಾಜ್ ದೂರನ್ನು ನೀಡಿದ್ದು ಸುಮೋಟೋ ಪ್ರಕರಣ [0133/2024] ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಗೋಮಾಂಸದ ತ್ಯಾಜ್ಯ ಇರುವುದು ಮಾತ್ರ ಸತ್ಯ ಹೊರತು ಉಳಿದೆಲ್ಲ ವಿಚಾರಗಳು ಸತ್ಯಕ್ಕೆ ದೂರವಾಗಿದ್ದು ವೈದ್ಯಾಧಿಕಾರಿಗಳು ಸಹ ಪ್ರಕರಣದಲ್ಲಿ ಸೂಚಿಸುವ ಸಮಯಕ್ಕೆ ಠಾಣೆಗೆ ಬಂದಿರುವುದಿಲ್ಲ. ಠಾಣೆ ಸಿಸಿಟಿವಿ ದಾಖಲೆ ಪರೀಕ್ಷಿಸಿದಲ್ಲಿ ಸತ್ಯಾಂಶ ಹೊರಬರುತ್ತದೆ. ಸಂಪೂರ್ಣ ಪ್ರಕರಣದ ಸಮಯ, ಪಂಚನಾಮೆ ಸಮಯ, ಸ್ಥಳಕ್ಕೆ ಭೇಟಿ ನೀಡಿರುವ ಸಮಯ ಎಲ್ಲವೂ ಸುಳ್ಳಾಗಿದ್ದು ಆಗ ತಾನೆ ತಂದು ಹಾಕಿರುವ ಗೋವಿನ ಖಲೀಜಗಳು ಸ್ಥಳದಲ್ಲಿ ಇದ್ದರೂ 8-10 ದಿನದ ಮುಂಚೆ ತಂದು ಹಾಕಿದ್ದಾರೆ ಎಂದು ಉದ್ದೇಶಪೂರ್ವಕವಾಗಿ ಪ್ರಕರಣದ ವರದಿ ಇಷ್ಟಕ್ಕೆ ಬಂದಂತೆ ಸುಳ್ಳಾಗಿ ದಾಖಲಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.8-10 ದಿನಗಳ ಮುಂಚೆ ಸಾವಿರಾರು ಗೋವುಗಳು ಹತ್ಯೆ ಮಾಡಿ ತಂದು ಹಾಕಿರುವುದು ಏಕೆ ಇವರ ಗಮನಕ್ಕೆ ಬಂದಿಲ್ಲ. ಸುಮಾರು ಸಾವಿರಾರು ಗೋವುಗಳು ಹತ್ಯೆ ಆದರೂ ಸಹ ಮೂರು ನಾಲ್ಕು ತಿಂಗಳಿನಲ್ಲಿ ಸಬ್ ಇನ್ಸ್‌ಪೆಕ್ಟರ್ ಮೇಲ್ನೋಟಕ್ಕೆ ಮಾತ್ರ ನಾವು ನೀಡಿರುವ ಮಾಹಿತಿ ಆದಾರದಡಿ ಕೆಲ ಪ್ರಕರಣ ಮಾತ್ರ ದಾಖಲಿಸಿಕೊಂಡು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಇದರಿಂದಾಗಿ ಗೋ ಹಂತಕರ ಜತೆ ಪಿಎಸ್‌ಐ ರಮೇಶ್‌ಗೆ ಸಂಬಂಧ ಇದೆ ಎಂಬ ಅನುಮಾನ ಮೂಡಿ ಬರುತ್ತಿದೆ. ಪ್ರಕರಣ ಹಾದಿ ತಪ್ಪಿಸಲು ಮೇಲ್ಕಂಡ ರೀತಿಯಲ್ಲಿ ಸುಮೋಟೋ ಪ್ರಕರಣ ದಾಖಲು ಮಾಡಿರುವ ಸಬ್ ಇನ್ಸ್‌ಪೆಕ್ಟರ್ ರಮೇಶ್ ಮತ್ತು ಪ್ರಕರಣಕ್ಕೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ತನಿಖೆಗೊಳಪಡಿಸಿ ಅಮಾನತುಗೊಳಿಸುವಂತೆ ಸಂಘಟನೆಗಳ ಮುಖಂಡರು ಆಗ್ರಹಿಸಿದರು.ಶಿರಾಳಕೊಪ್ಪದಲ್ಲಿ ಗೋಹತ್ಯೆ ಸಂಪೂರ್ಣ ನಿಲ್ಲಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಗೋಹತ್ಯೆಯಿಂದ ನೊಂದ ಹಿಂದೂ ಸಮಾಜ, ಪಿಎಸ್‌ಐ ಅಮಾನತು ಗೊಳಿಸಲು ಆಗ್ರಹಿಸಿ ದೊಡ್ಡ ಮಟ್ಟದಲ್ಲಿ ಕಾನೂನಾತ್ಮಕ ಹೋರಾಟವನ್ನು ಸಾವಿರಾರು ಜನತೆ ಸೇರಿ ಜನಾಂದೋಲನ ಚಳವಳಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ವಿವಿಧ ಹಿಂದೂ ಪರ ಸಂಘಟನೆ ಮುಖಂಡ ಶಿವರಾಜ್, ನ್ಯಾಯವಾದಿ ಪ್ರದೀಪ್, ಎಸ್ ವಿ ಕೆ ಮೂರ್ತಿ, ಪ್ರಕಾಶ್ ಜಿನ್ನು, ಬಿ.ಎಲ್ ರವೀಂದ್ರ, ಲೋಕೇಶ್, ಕುಮಾರಸ್ವಾಮಿ ಹಿರೇಮಠ್, ಶರತ್, ಸದ್ಗುಣ, ರಾಜ್ ಭಜರಂಗಿ, ವಿಶ್ವಣ್ಣ ಮತ್ತಿತರರಿದ್ದರು.