ಇಂದು ಭದ್ರಾ ಡ್ಯಾಂ ಗೇಟ್‌ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ: ರೇಣುಕಾಚಾರ್ಯ

| Published : Jul 08 2024, 12:33 AM IST

ಇಂದು ಭದ್ರಾ ಡ್ಯಾಂ ಗೇಟ್‌ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ: ರೇಣುಕಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿಯ ಭದ್ರಾ ಡ್ಯಾಂನಿಂದ ಅನಾವಶ್ಯಕವಾಗಿ 5 ಸಾವಿರ ಕ್ಯುಸೆಕ್‌ ನೀರು ನದಿ ಪಾಲಾಗುತ್ತಿದೆ. ತಕ್ಷಣ‍ ಡ್ಯಾಂಗಳ ಗೇಟುಗಳನ್ನು ದುರಸ್ತಿಪಡಿಸಬೇಕು. ಇಲ್ಲದಿದ್ದರೆ ಜು.8ರಂದು ಭದ್ರಾ ಡ್ಯಾಂ ಬಳಿ ಪ್ರತಿಭಟನೆ ನಡೆಸಬೇಕಾದೀತು ಎಂದು ಬಿಜೆಪಿ ಮುಖಂಡರಾದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ದಾವಣಗೆರೆಯಲ್ಲಿ ಎಚ್ಚರಿಸಿದ್ದಾರೆ.

- ಅಣೆಕಟ್ಟು ಗೇಟ್ ದುರಸ್ತಿಗೂ ಕಾಸಿಲ್ಲದ ಪಾಪರ್‌ ಕಾಂಗ್ರೆಸ್ ಸರ್ಕಾರ: ಟೀಕೆ । ಅಧಿಕಾರಿಗಳ ನಿರ್ಲಕ್ಷ್ಯದಿಂದ 5 ಸಾವಿರ ಕ್ಯುಸೆಕ್‌ ನೀರು ನದಿಪಾಲು

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿಯ ಭದ್ರಾ ಡ್ಯಾಂನಿಂದ ಅನಾವಶ್ಯಕವಾಗಿ 5 ಸಾವಿರ ಕ್ಯುಸೆಕ್‌ ನೀರು ನದಿ ಪಾಲಾಗುತ್ತಿದೆ. ತಕ್ಷಣ‍ ಡ್ಯಾಂಗಳ ಗೇಟುಗಳನ್ನು ದುರಸ್ತಿಪಡಿಸಬೇಕು. ಇಲ್ಲದಿದ್ದರೆ ಜು.8ರಂದು ಭದ್ರಾ ಡ್ಯಾಂ ಬಳಿ ಪ್ರತಿಭಟನೆ ನಡೆಸಬೇಕಾದೀತು ಎಂದು ಬಿಜೆಪಿ ಮುಖಂಡರಾದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಡ್ಯಾಂನಿಂದ ಸಾವಿರಾರು ಕ್ಯುಸೆಕ್‌ ನೀರು ನದಿಗೆ ಹರಿದು ಪೋಲಾಗುತ್ತಿದೆ. ಇದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು, ಜನರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಡ್ಯಾಂನ ಗೇಟು ದುರಸ್ತಿಪಡಿಸುವ ಕೆಲಸ ಆಗಬೇಕು ಎಂದರು.

ತೀವ್ರ ಬರದ ಹಿನ್ನೆಲೆ ಕಳೆದ ವರ್ಷ ರೈತರು ತೀವ್ರ ತೊಂದರೆ ಅನುಭವಿಸಿದರು. ಭದ್ರಾ ನೀರು ಆಶ್ರಿತ ನಗರ, ಪಟ್ಟಣ ಜನರು ನೀರಿಗಾಗಿ ಪರಿತಪಿಸಿದ್ದರು. ಮುಂಗಾರು ಮಳೆ ಕಳೆದೊಂದು ವಾರದಿಂದ ಉತ್ತಮವಾಗಿ ಆಗುತ್ತಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದ ಬೆನ್ನಲ್ಲೇ ಭದ್ರಾ ಡ್ಯಾಂನಿಂದ ನೀರು ಸೋರಿಕೆ ಆತಂಕ ತಂದೊಡ್ಡಿದೆ ಎಂದು ದೂರಿದರು.

ಡ್ಯಾಂ ಗೇಟುಗಳನ್ನು ದುರಸ್ತಿಪಡಿಸದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 5 ಸಾವಿರ ಕ್ಯುಸೆಕ್‌ ನೀರು ನದಿ ಪಾಲಾಗುತ್ತಿದೆ. ಇದರಿಂದ ರೈತರು ಬೆಳೆದ ಬೆಳೆಗಳಿಗೆ ನೀರು ಸಿಗದೇ ತೀವ್ರ ಅನ್ಯಾಯವಾಗಲಿದೆ. ಈ ಬಗ್ಗೆ ಭದ್ರಾ ಕಾಡಾ ಅಧಿಕಾರಿಗಳಿಗೆ ನಾಲ್ಕೈದು ದಿನಗಳ ಹಿಂದೆಯೇ ವಿಚಾರ ತಿಳಿಸಿ, ದುರಸ್ತಿ ಕೈಗೊಳ್ಳುವಂತೆ ರೈತರು ಒತ್ತಾಯಿಸಿದರೂ ಸ್ಪಂದಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಜು.8ಕ್ಕೆ ಲಕ್ಕವಳ್ಳಿಯ ಭದ್ರಾ ಡ್ಯಾಂ ಬಳಿ ಪ್ರತಿಭಟಿಸಲಾಗುವುದು ಎಂದು ಹೇಳಿದರು.

ಭದ್ರಾ ಡ್ಯಾಂ ವೀಕ್ಷಣೆ ಮಾಡಿ, ಅಗತ್ಯ ಬಿದ್ದರೆ ಅಲ್ಲಿಯೇ ಪ್ರತಿಭಟನಾ ಧರಣಿ ನಡೆಸುತ್ತೇವೆ. ಭದ್ರಾ ಅಚ್ಚುಕಟ್ಟು ರೈತರು ಜು.8ರಂದು ರೊಟ್ಟಿ, ಬುತ್ತಿ ಸಮೇತ ಲಕ್ಕವಳ್ಳಿಯ ಭದ್ರಾ ಡ್ಯಾಂಗೆ ಆಗಮಿಸಬೇಕು. ಕಳೆದ ವರ್ಷದ ಬರದ ವೇಳೆ ನೀರಿನಲ್ಲದೇ ಪರಿಪಾಟಲು ಅನುಭವಿಸಿದ್ದ ರೈತರು, ಜನರ ಸಂಕಷ್ಟ ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೇ? ಮುಂದಿನ ದಿನಗಳು, ಬೇಸಿಗೆ ದಿನಗಳನ್ನೂ ಗಮನದಲ್ಲಿಟ್ಟುಕೊಂಡು, ಡ್ಯಾಂನ ಗೇಟ್ ದುರಸ್ತಿಪಡಿಸಬೇಕಾದ ಅಧಿಕಾರಿಗಳ ಅಸಡ್ಡೆ ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.

ಡ್ಯಾಂನ ಗೇಟುಗಳನ್ನು ದುರಸ್ತಿಪಡಿಸಲು ಸಹ ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ. ಇದೊಂದು ಪಾಪರ್ ಎದ್ದಿರುವ ಸರ್ಕಾರವಾಗಿದೆ. ಭದ್ರಾ ಡ್ಯಾಂ ದುರಸ್ತಿ ಕಾರ್ಯವು ಶಾಶ್ವತವಾಗಿ ಪರಿಹಾರ ಕಾಣಬೇಕು. ಜು.8ರ ಒಳಗಾಗಿ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ, ಅಲ್ಲಿಯೇ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸುತ್ತೇವೆ. ಅಧಿಕಾರಿಗಳ ಬೇಜವಾಬ್ದಾರಿತ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.

ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧಿಕಾರಿಗಳು ಮಾತ್ರವೇ ರಾಜೀನಾಮೆ ಕೊಟ್ಟರೆ ಸಾಲುವುದಿಲ್ಲ. ಈ ಹಗರಣದಲ್ಲಿ ಇಡೀ ಕಾಂಗ್ರೆಸ್ ಸರ್ಕಾರವೇ ಶಾಮೀಲಾಗಿದೆ. ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಲ್ಮೀಕಿ ನಿಗಮದ ನೂರಾರು ಕೋಟಿ ಹಗರಣದ ಹಿನ್ನೆಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎಂ.ಪಿ.ರೇಣುಕಾಚಾರ್ಯ ತಾಕೀತು ಮಾಡಿದರು.

ಮಾಡಾಳ ಮಲ್ಲಿಕಾರ್ಜುನ ಮಾತನಾಡಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ಪಕ್ಷದ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ಹರಿಹರದ ಚಂದ್ರಶೇಖರ ಪೂಜಾರ, ಪ್ರವೀಣ ಜಾಧವ್, ಆರನೇ ಕಲ್ಲು ವಿಜಯಕುಮಾರ, ಬಾತಿ ಶಿವಕುಮಾರ ಇತರರು ಇದ್ದರು.

- - - ಕೋಟ್ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿನಲ್ಲಿ ನಿವೇಶನವಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಪಾರದರ್ಶಕ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

- - - -7ಕೆಡಿವಿಜಿ3, 4:

ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡ ಮಾಡಾಳ್ ಮಲ್ಲಿಕಾರ್ಜುನ ಮತ್ತಿತರ ಮುಖಂಡರು ಇದ್ದರು.