ಮುಸ್ತಾಫಾ ಖಾದ್ರಿ ಎಂಬಾತನ ಮೊಬೈಲ್‌ನಲ್ಲಿ ಸಾವಿರಾರು ವೀಡಿಯೋ, ಫೋಟೋಗಳು ಇರುವುದರಿಂದ ಯುವತಿಯರು ಆಘಾತಕೊಂಡಿದ್ದಾರೆ. ಇದರಿಂದ ಅದೆಷ್ಟೋ ಅಮಾಯಕ ಹೆಣ್ಣುಮಕ್ಕಳು ಭವಿಷ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತದೆ
ಕೊಪ್ಪಳ: ಯುವತಿಯರೊಂದಿಗೆ ವೀಡಿಯೋ, ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡುತ್ತಲೇ ಲವ್ ಜಿಹಾದ್ ಆರೋಪಿಯಾಗಿರುವ ಮುಸ್ತಾಫಾನನ್ನು ಬಂಧಿಸುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಗುರುವಾರ ಸಂಜೆ ನಗರದ ಎಸ್ಪಿ ಕಚೇರಿಗೆ ಭೇಟಿ ನೀಡಿ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ಅವರಿಗೆ ಮನವಿ ಸಲ್ಲಿಸಿ, ಅಮಾಯಕ ಹೆಣ್ಣುಮಕ್ಕಳೊಂದಿಗೆ ಚೆಲ್ಲಾಟವಾಡುತ್ತಿರುವ ಮುಸ್ತಾಫಾನನ್ನು ಬಂಧಿಸಿ ತನಿಖೆ ಮಾಡುವಂತೆ ಆಗ್ರಹಿಸಿದರು.ವಿಪ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ಮುಸ್ತಾಫಾ ಖಾದ್ರಿ ಎಂಬಾತನ ಮೊಬೈಲ್‌ನಲ್ಲಿ ಸಾವಿರಾರು ವೀಡಿಯೋ, ಫೋಟೋಗಳು ಇರುವುದರಿಂದ ಯುವತಿಯರು ಆಘಾತಕೊಂಡಿದ್ದಾರೆ. ಇದರಿಂದ ಅದೆಷ್ಟೋ ಅಮಾಯಕ ಹೆಣ್ಣುಮಕ್ಕಳು ಭವಿಷ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ತಕ್ಷಣ ಆರೋಪಿ ಬಂಧಿಸಿ ಕ್ರಮ ವಹಿಸುವ ಮೂಲಕ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ ಕ್ಯಾವಟರ್ ಮಾತನಾಡಿ, ಲವ್ ಜಿಹಾದ್ ಪ್ರಕರಣ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದು ಕಳವಳಕಾರಿಯಾಗಿದೆ. ಇಂತಹ ಘಟನೆ ನಡೆದಾಗ ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಂಡು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾದರೆ ಮುಂದಾಗುವ ಅನಾಹುತ ತಪ್ಪಿಸಬಹುದು ಎಂದರು.ಇದನ್ನು ಪ್ರಶ್ನೆ ಮಾಡಿದರೆ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಅದನ್ನೇ ಅಪಹಾಸ್ಯ ಮಾಡಿದ್ದಾರೆ ಎಂದು ಕಿಡಿಕಾರಿದರು. ಸಂಸದರು ನಡೆಸುತ್ತಿರುವ ಅಕ್ರಮ ಮರಳು ಗಣಿಗಾರಿಕೆ, ಪ್ರೇರಣಾ ಸಂಸ್ಥೆಯಂತೆ ನಾನು ಅಕ್ರಮ ಚಟುವಟಿಕೆ ಮಾಡುತ್ತಿಲ್ಲ. ಸಮಾಜದಲ್ಲಿ ಘಾತುಕಶಕ್ತಿಗಳು ನಡೆಸುತ್ತಿರುವ ಲವ್ ಜಿಹಾದ್ ವಿರೋಧಿಸುತ್ತಿದ್ದೇನೆ. ಹಿಂದು ಯುವತಿಯರ ರಕ್ಷಣೆಗೆ ಹೋರಾಟ ಮಾಡುತ್ತೇನೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಮಾತನಾಡಿ, ಲವ್ ಜಿಹಾದ್ ನಡೆಯುತ್ತಿದ್ದರೂ ಅದನ್ನು ತಡೆಯಬೇಕಾದ ಪೊಲೀಸ್ ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಾಂಗ್ರೆಸ್ ಇದಕ್ಕೆ ಸಾಥ್ ನೀಡುವಂತೆ ವರ್ತಿಸುತ್ತಿದೆ. ಗಾಂಜಾ, ಚರಸ್ ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವುದು ದುರಂತ. ಮುಸ್ತಾಫಾನನ್ನು ಬಂಧಿಸಿ ಕ್ರಮಕೈಗೊಳ್ಳದಿದ್ದರೆ ಬಿಜೆಪಿ ಹೋರಾಟ ತೀವ್ರಗೊಳಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಸುನೀಲ್ ಹೆಸರೂರು, ಅಮರೇಶ ಮುರಳಿ, ರಾಘು ಚಾಕರಿ, ಚನ್ನಬಸವ ಗಾಳಿ, ಡಾ. ಗೋವೆನಕೊಪ್ಪ, ಜಯಶ್ರಿ ಗೊಂಡಬಾಳ, ಕೀರ್ತಿ ಪಾಟೀಲ್, ದೇವರಾಜ ಹಾಲಸಮುದ್ರ, ಉಮೇಶ ಕೊರಡೇಕರ, ಮಂಜುನಾಥ, ನೀಲಕಂಠಯ್ಯ ಹಿರೇಮಠ ಇದ್ದರು.
ಲವ್ ಜಿಹಾದ್ ಪ್ರಕರಣ, ಎಫ್‌ಎಸ್‌ಎಲ್‌ಗೆ ಮುಸ್ತಾಫಾ ಮೊಬೈಲ್ ಹಸ್ತಾಂತರಸಾವಿರಾರು ಫೋಟೋ ಮತ್ತು ವೀಡಿಯೋ ಇರುವ ಲವ್ ಜಿಹಾದ್ ಆರೋಪ ಎದುರಿಸುತ್ತಿರುವ ಮುಸ್ತಾಫಾ ಖಾದ್ರಿಯ ಎರಡು ಮೊಬೈಲ್ ಕೊಪ್ಪಳ ನಗರ ಠಾಣೆಯ ಪ್ರಭಾರಿ ಪಿಐ ಆಂಜನೇಯ ಬೆಂಗಳೂರಿನ ಎಫ್‌ಎಸ್‌ಎಲ್ ಕಚೇರಿಗೆ ಹಸ್ತಾಂತರಿಸಿದರು.
ಎಫ್‌ಎಸ್‌ಎಲ್ ವರದಿ ಬಾರದೇ ಕ್ರಮಕೈಗೊಳ್ಳುವುದಕ್ಕೆ ಅವಕಾಶ ಇಲ್ಲ. ಮೊಬೈಲ್‌ನಲ್ಲಿ ಸಾವಿರಾರು ಫೋಟೋ, ವೀಡಿಯೋ ಇವೆ ಎನ್ನುವ ಕುರಿತು ಅಧಿಕೃತವಾಗಿ ಎಫ್ಐಆರ್ ಆಗಿದ್ದರೂ ಮೊಬೈಲ್ ತೆರೆದ ನಂತರ ಸತ್ಯಾಸತ್ಯತೆ ಹೊರಗೆ ಬರುತ್ತದೆ. ಆಗಲೇ ತಪಾಸಣೆ ಮಾಡಿ, ಅಗತ್ಯ ಕಾನೂನು ಕ್ರಮಕೈಗೊಳ್ಳಬಹುದು ಎನ್ನುವುದು ಪೊಲೀಸ್ ಇಲಾಖೆಯ ವಾದವಾಗಿದೆ.ಈ ನಡುವೆ ಮೊಬೈಲ್‌ನಲ್ಲಿದ್ದ ವೀಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹೀಗಾಗಿ, ಆತನನ್ನು ಬಂಧಿಸುವಂತೆ ಆಗ್ರಹವೂ ಕೇಳಿ ಬರುತ್ತಿದೆ.
ಆರೋಪಿಯ ಮೊಬೈಲ್ ಎಫ್‌ಎಸ್‌ಎಲ್‌ಗೆ ನೀಡಲಾಗಿದ್ದು, ಅದರ ಲಾಕ್ ತೆರೆದು ಅದರಲ್ಲಿರುವ ಮಾಹಿತಿ ಪಡೆದ ಮೇಲೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಕೊಪ್ಪಳ ನಗರ ಠಾಣೆ ಪ್ರಭಾರಿ ಪಿಐ ಆಂಜನೇಯ ತಿಳಿಸಿದ್ದಾರೆ.