ಆಗಸ್ಟ್ 19ರ ಸಂಜೆ ಪುರಸಭೆಗೆ ಸೇರಿದ ಮಳಿಗೆ ಬಾಡಿಗೆ ವಿಚಾರವಾಗಿ ಮಾಜಿ ಸದಸ್ಯ ಪುರಸಭೆ ಕಚೇರಿಗೆ ಏಕಾಏಕಿ ನುಗ್ಗಿ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮೇಲೆ ದುರ್ನಡೆತೆಯಿಂದ ನಡೆದುಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಕೂಡ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಕೊಲೆ ಬೆದರಿಕೆ ಹಾಕಿರುವ ಮಾಜಿ ಸದಸ್ಯ ಪಾರ್ಥಸಾರಥಿಯನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ ಒತ್ತಾಯಿಸಿದರು.ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 19ರ ಸಂಜೆ ಪುರಸಭೆಗೆ ಸೇರಿದ ಮಳಿಗೆ ಬಾಡಿಗೆ ವಿಚಾರವಾಗಿ ಮಾಜಿ ಸದಸ್ಯ ಪುರಸಭೆ ಕಚೇರಿಗೆ ಏಕಾಏಕಿ ನುಗ್ಗಿ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮೇಲೆ ದುರ್ನಡೆತೆಯಿಂದ ನಡೆದುಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಕೂಡ ನಡೆಸಿದ್ದಾರೆ. ಜೊತೆಗೆ ಕೊಲೆ ಬೆದರಿಕೆ ಹಾಕಿ ಭಯದ ವಾತಾವರಣ ನಿರ್ಮಾಣ ಮಾಡಿರುವುದನ್ನು ಖಂಡಿಸಿದರು.
ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಪುರಸಭೆ ಸಿಬ್ಬಂದಿ ಕೂಡ ಬೆಚ್ಚಿಬಿದ್ದಿದ್ದಾರೆ. ಪುರಸಭೆ ಮಳಿಗೆ ಬಾಡಿಗೆ ವಿಚಾರವಾಗಿ ಕಾನೂನು ಬದ್ಧವಾಗಿ ಚರ್ಚೆ ನಡೆಸಬೇಕಿತ್ತು. ಒಂದು ವೇಳೆ ಮುಖ್ಯಾಧಿಕಾರಿಗಳು ಸ್ಪಂದಿಸದಿದ್ದರೆ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಬಹುದಾಗಿತ್ತು. ಆದರೆ, ಅದನ್ನು ಬಿಟ್ಟು ಮುಖ್ಯಾಧಿಕಾರಿ ಮೇಲೆ ಏಕಾಏಕಿ ಹಲ್ಲೆಗೆ ಮುಂದಾಗಿರುವುದು ಕ್ರಮವಲ್ಲ ಎಂದರು.ಈ ಘಟನೆಯಿಂದ ನೊಂದು ಘಾಸಿಗೊಂಡ ಮುಖ್ಯಾಧಿಕಾರಿ ಸತೀಶ್ ಕುಮಾರ್ ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಗುರುವಾರ ಈ ದೂರನ್ನು ಸ್ವೀಕರಿಸಿದ ಪೊಲೀಸರು ಆರೋಪಿ ಪಾರ್ಥಸಾರಥಿ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಆ ಪ್ರಕಾರ ಪೊಲೀಸರು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾ ಮತ್ತು ರಾಜ್ಯ ನೌಕರರ ಸಂಘದ ಸಹಕಾರದೊಂದಿಗೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಡಾ.ಸಿ.ಎ.ಅರವಿಂದ್ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಕಾನೂನು ಚೌಕಟ್ಟಿನೊಳಗೆ ಕೆಲಸ ಮಾಡಬೇಕಿದೆ. ಸಾರ್ವಜನಿಕರು, ಸಾಮಾಜಿಕ ಸಂಘಟನೆಗಳು, ಹೋರಾಟಗಾರರು, ಜನಪ್ರತಿನಿಧಿಗಳು ಕಾನೂನಾತ್ಮಕವಾಗಿ ವ್ಯವಹರಿಸಬೇಕೆ ಹೊರತು ಅಧಿಕಾರಿಗಳು ಅಥವಾ ನೌಕರರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಾನಸಿಕವಾಗಿ ಅವಮಾನಿಸುವುದು ಸರಿಯಲ್ಲ. ಅಧಿಕಾರಿಗಳು ಮತ್ತು ನೌಕರರಿಗೆ ಅನ್ಯಾಯವಾದಾಗ ಸರ್ಕಾರಿ ನೌಕರರ ಸಂಘವು ಬೆಂಬಲವಾಗಿ ನಿಲ್ಲುತ್ತದೆ ಎಂದರು.ಈ ವೇಳೆ ತಾಲೂಕು ಸಂಘದ ಗೌರವ ಅಧ್ಯಕ್ಷ ಕ್ಯಾತನಹಳ್ಳಿ ಶ್ರೀನಿವಾಸ್, ಹಿರಿಯ ಉಪಾಧ್ಯಕ್ಷ ಡಿ.ಪಿ.ಕುಮಾರ್, ಉಪಾಧ್ಯಕ್ಷರಾದ ಸಂಜೀವ್ ರಾಥೋಡ್, ಲೋಕೇಶ್, ಕಾರ್ಯದರ್ಶಿ ಎಂ.ಡಿ.ಕುಮಾರ್, ನಿರ್ದೇಶಕ ನಾಗೇಗೌಡ ಇತರರು ಇದ್ದರು.