ಸಾರಾಂಶ
ಕ್ರೂರಿಗಳು ನಡೆಸಿರುವ ಈ ಕೃತ್ಯ ಅಮಾನವೀಯ. ಮನುಷ್ಯತ್ವ, ಮಾನವೀಯತೆಯಿಲ್ಲದೆ ಮೂಕ ಪ್ರಾಣಿಗಳ ಮೇಲೆ ಮತಾಂಧ ಧುರುಳರು ನಡೆಸಿರುವ ದೌರ್ಜನ್ಯ ಖಂಡನೀಯ
ಮಂಡ್ಯ : ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿರುವ ಕ್ರೂರಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹನುಮಧ್ವಜ ಸಮಿತಿ ಕಾರ್ಯಕರ್ತರು ತಾಲೂಕಿನ ಕೆರಗೋಡು ಗ್ರಾಮದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ಹಾಲು ಕೊಡುವ ಹಸುವಿನ ಕೆಚ್ಚಲನ್ನು ದುರ್ಷರ್ಮಿಗಳು ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಇದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಅವರೊಂದಿಗೂ ಕೆಲವು ಮತಾಂಧ ದುಷ್ಕರ್ಮಿಗಳು ಜಗಳ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಾಗಿನಿಂದ ಇಂತಹ ಘಟನೆಗಳು ಹೆಚ್ಚಾಗಿದ್ದು, ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ಹನುಮಧ್ವಜ ಸಮಿತಿಯ ಮುಖಂಡ ಬಸಂತ್ ಕೆರಗೋಡು ಮಾತನಾಡಿ, ಮತಾಂಧ ಕ್ರೂರಿಗಳು ನಡೆಸಿರುವ ಈ ಕೃತ್ಯ ಅಮಾನವೀಯ. ಮನುಷ್ಯತ್ವ, ಮಾನವೀಯತೆಯಿಲ್ಲದೆ ಮೂಕ ಪ್ರಾಣಿಗಳ ಮೇಲೆ ಮತಾಂಧ ಧುರುಳರು ನಡೆಸಿರುವ ದೌರ್ಜನ್ಯ ಖಂಡನೀಯ. ಇದನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸಬೇಕು. ತಾಯಿ ಎದೆಹಾಲು ನೀಡುವ ಸ್ಥಿತಿ ಇರುವುದನ್ನು ನೋಡದೇ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿ ಹಾಕಿರುವುದು ಘೋರ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ಯಶವಂತ್ ಮಾತನಾಡಿ, ವಿಶೇಷವಾಗಿ ಸಂಕ್ರಾಂತಿ ಹಬ್ಬವನ್ನು ಮುಂದಿಟ್ಟುಕೊಂಡು ಹಿಂದೂಗಳ ಮನಸ್ಸಿಗೆ ಘಾಸಿ ಮಾಡುವ ಉದ್ದೇಶದಿಂದಲೇ ಹಿಂದೂಗಳ ಆರಾಧ್ಯ ದೈವ ಗೋವುಗಳ ಕೆಚ್ಚಲನ್ನು ಕತ್ತರಿಸಿ ಹಾಕಿರುವುದು ಅಮಾನವೀಯ. ಇವರಿಗೆ ಕಾನೂನಿನಡಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕಾರ್ತೀಕ್, ಕೆ.ಪು.ರಮೇಶ್, ಹರೀಶ್, ಅಪ್ಪಾಜಿ, ಸಾಗರ್, ಪ್ರಸನ್ನ, ರಂಗಣ್ಣ, ಕೆಂಪಮ್ಮ, ಚಿಕ್ಕೋಳಮ್ಮ, ಎಲ್.ಆರ್.ನಾಗೇಶ್, ರವಿ ಭಾಗವಹಿಸಿದ್ದರು.