ಉತ್ತರ ಕರ್ನಾಟಕದಲ್ಲಿ ಬಯಲಾಟ ಕಲೆ ಹೆಚ್ಚು ಪ್ರಚಲಿತದಲ್ಲಿದೆ. ಹೀಗಾಗಿ ಮೈಸೂರಿನ ರಂಗಾಯಣ ಮಾದರಿಯಲ್ಲಿ ಬಳ್ಳಾರಿಯಲ್ಲಿ ಬೈಲಾಟ ರಂಗಶಾಲೆ ಸ್ಥಾಪಿಸಬೇಕು.

ಬಳ್ಳಾರಿ: ರಾಜ್ಯದಲ್ಲಿ ವೃತ್ತಿಪರ ಬೈಲಾಟ ಕಲಾವಿದರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಅವರ ಬದುಕಿಗೆ ಭದ್ರತೆ ಕಲ್ಪಿಸುವುದರ ಜತೆಗೆ ಬಯಲಾಟ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಬಯಲಾಟ ಪರಿಷತ್ ವೃತ್ತಿಪರ ಕಲಾವಿದರ ಸಂಘದ ರಾಜ್ಯ ಸಮಿತಿಯ ಸಲಹೆಗಾರ ವಿ.ಎಸ್.ಶಿವಶಂಕರ್ ಆಗ್ರಹಿಸಿದರು.

ನಗರದ ಬಸವ ಭವನದಲ್ಲಿ ಅಖಿಲ ಕರ್ನಾಟಕ ಬಯಲಾಟ ಪರಿಷತ್ ವೃತ್ತಿಪರ ಕಲಾವಿದರ ಸಂಘದ ರಾಜ್ಯ ಸಮಿತಿ ಹಾಗೂ ಬಳ್ಳಾರಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಲಾವಿದರ ಸರ್ವಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಬಯಲಾಟ ಕಲೆ ಹೆಚ್ಚು ಪ್ರಚಲಿತದಲ್ಲಿದೆ. ಹೀಗಾಗಿ ಮೈಸೂರಿನ ರಂಗಾಯಣ ಮಾದರಿಯಲ್ಲಿ ಬಳ್ಳಾರಿಯಲ್ಲಿ ಬೈಲಾಟ ರಂಗಶಾಲೆ ಸ್ಥಾಪಿಸಬೇಕು. ಜತೆಗೆ ಬಳ್ಳಾರಿ ನಗರದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಸ್ಥಾಪಿಸಿ, ರಾಜ್ಯಮಟ್ಟದ ಬಯಲಾಟ ಉತ್ಸವ ಆಯೋಜಿಸಲು ಸರ್ಕಾರ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ವೃತ್ತಿಪರ ಕಲಾವಿದರಿಗೆ ಸಮರ್ಪಕ ಮಾಸಾಶನ ಸೌಲಭ್ಯವಿಲ್ಲ. ಆದ್ದರಿಂದ ಅರ್ಹ ಎಲ್ಲ ಕಲಾವಿದರಿಗೆ ಮಾಸಾಶನ ನೀಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಿಡುಗಡೆಯಾಗುವ ಅನುದಾನ ಹಾಗೂ ಧನಸಹಾಯ ನೇರವಾಗಿ ಕಲಾವಿದರಿಗೆ ತಲುಪುವಂತೆ ವ್ಯವಸ್ಥೆ ಮಾಡಬೇಕು. ಕಲಾವಿದರಿಗೆ ತಕ್ಷಣ ಗುರುತಿನ ಚೀಟಿ ವಿತರಿಸುವುದರ ಜತೆಗೆ ಕಲಾವಿದರ ಹಿತಾಸಕ್ತಿ ಕಾಪಾಡಲು ಪ್ರತ್ಯೇಕ ಪ್ರತಿಷ್ಠಾನ ಅಥವಾ ಟ್ರಸ್ಟ್ ಸ್ಥಾಪಿಸಬೇಕು ಎಂದರು.

ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಎಚ್.ಎಂ.ಪಂಪಯ್ಯಸ್ವಾಮಿ ಮಾತನಾಡಿ, ಅಳಿವಿನಂಚಿನಲ್ಲಿರುವ ಬಯಲಾಟದ ಸ್ತ್ರೀ ಪಾತ್ರಧಾರಿಗಳ ರಂಗಗೀತೆಗಳು, ಹಾಡುಗಾರಿಕೆ ಹಾಗೂ ಕಲಾಪ್ರಕಾರಗಳನ್ನು ಧ್ವನಿಮುದ್ರಣ, ಚಿತ್ರೀಕರಣ ಮತ್ತು ದಾಖಲಾತಿಗಳ ಮೂಲಕ ಬಯಲಾಟ ಅಕಾಡೆಮಿ ಸಂಗ್ರಹಿಸಬೇಕು. ದೀರ್ಘಕಾಲದ ಕಾಯಿಲೆ ಅಥವಾ ಮಾರಕ ರೋಗಗಳಿಂದ ಬಳಲುವ ಕಲಾವಿದರಿಗೆ ವೈದ್ಯಕೀಯ ನೆರವು ನೀಡುವ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಕಲಾವಿದರ ಬೇಡಿಕೆ ಸರ್ಕಾರ ಕೂಡಲೇ ಈಡೇರಿಸದಿದ್ದರೆ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ರಾಜ್ಯದ ಕಲಾವಿದರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪರಿಷತ್‌ನ ಗೌರವಾಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಜಿಲ್ಲಾ ನಿರ್ದೇಶಕ ಎಚ್.ಗುರುಸ್ವಾಮಿ, ಜಿಲ್ಲಾಧ್ಯಕ್ಷ ಆರ್. ಬಸವನಗೌಡ, ತಿಮ್ಮರೆಡ್ಡಿ, ರಂಗಾರೆಡ್ಡಿ, ಹನುಮವದೂತ, ಬಸಪ್ಪ ಆಚಾರಿ, ಶ್ರೀನಿವಾಸ, ರುದ್ರಣ್ಣ, ಬ್ರಹ್ಮಯ್ಯ, ದೊಡ್ಡಬಸಪ್ಪ ಆಚಾರಿ, ತೇಜರಾಜ, ರಾಮಾಂಜನಿ, ಮೋಹನ, ಕೂಡ್ಲಿಗಿ, ಎಸ್. ಅಂಜಿನಮ್ಮ, ಗೀತಮ್ಮ, ಸುಮಾ, ತಾರಾ, ಮಂಜಮ್ಮ, ಉಮಾ, ಜ್ಯೋತಿ, ತಬಲಾ ನಾಗೇಶ್, ಕರಿಬಸವನಗೌಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಹಿರಿಯ ಹಾಗೂ ಕಿರಿಯ ಕಲಾವಿದರು ಭಾಗವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಕೆ. ನಾಗೇಶ್, ಬಿ. ವೀರೇಶ್, ಕೆ. ಶರಣಬಸವ, ಎಚ್.ಎಂ. ರೇಣುಕಸ್ವಾಮಿ ಉಪಸ್ಥಿತರಿದ್ದರು.