ಅರಣ್ಯ ಹಕ್ಕು ಅರ್ಜಿಗಳ ಮರುಪರಿಶೀಲನೆಯಿಂದ ೨೦೦೫ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡಲು ಜಿಲ್ಲಾ ಮಟ್ಟದಲ್ಲಿ ಇರುವ ತೊಡಕುಗಳನ್ನು ತೆಗೆದುಹಾಕಿ ಸಮಸ್ಯೆಗಳನ್ನು ಬಗೆಹರಿಸಬೇಕು.
ಯಲ್ಲಾಪುರ: ಜಿಲ್ಲೆಯಲ್ಲಿ ವಸತಿ ಮತ್ತು ಜೀವನೋಪಾಯಕ್ಕೆ ೨೦೦೫ರ ಪೂರ್ವದಿಂದ ಅರಣ್ಯ ಭೂಮಿಯನ್ನು ಅವಲಂಬಿಸಿರುವ ಲಕ್ಷಾಂತರ ಬಡ ಕುಟುಂಬಗಳ ಹಿತ ರಕ್ಷಿಸಲು ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರನ್ನು ಆಗ್ರಹಿಸಿದ್ದಾರೆ.
ಶನಿವಾರ ಪಟ್ಟಣದ ಕಾರ್ಯಕ್ರಮವೊಂದಕ್ಕೆ ಭಾಗವಹಿಸಿದ್ದ ಸಚಿವರನ್ನು ಭೇಟಿ ಮಾಡಿದ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಜಿ.ಎಂ. ಶೆಟ್ಟಿ ಅಚಿವೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ. ನಾಯ್ಕ ಅವರ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ. ಜಿಲ್ಲೆಯ ೨೦೦೫ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರ ಅತಿಕ್ರಮಣವನ್ನು ಸಕ್ರಮಪಡಿಸಲು ಇರುವ ಗೊಂದಲವನ್ನು ಬಗೆಹರಿಸಲು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಶಾಸಕರ ಉಪಸ್ಥಿತಿಯಲ್ಲಿ, ಹೋರಾಟ ಪ್ರಮುಖರೊಂದಿಗೆ ಉನ್ನತಾಧಿಕಾರ ಮಟ್ಟದ ಸಂವಾದ ಸಭೆ ಆಯೋಜಿಸಬೇಕು.ಅರಣ್ಯ ಹಕ್ಕು ಅರ್ಜಿಗಳ ಮರುಪರಿಶೀಲನೆಯಿಂದ ೨೦೦೫ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡಲು ಜಿಲ್ಲಾ ಮಟ್ಟದಲ್ಲಿ ಇರುವ ತೊಡಕುಗಳನ್ನು ತೆಗೆದುಹಾಕಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖವಾಗಿ ವಸತಿ ಮತ್ತು ಜೀವನೋಪಾಯಕ್ಕೆ ೨೦೦೫ರ ಪೂರ್ವದಿಂದ ಅರಣ್ಯ ಭೂಮಿಯನ್ನು ಅವಲಂಬಿಸಿರುವ ಜಿಲ್ಲೆಯ ಲಕ್ಷಾಂತರ ಬಡ ಕುಟುಂಬಗಳ ಬದುಕು ಅರಣ್ಯ ಹಕ್ಕುಕಾಯ್ದೆಯ ಅನುಷ್ಠಾನದಲ್ಲಿನ ವೈಫಲ್ಯದಿಂದ ಅತಂತ್ರ ಸ್ಥಿತಿಯಲ್ಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು. ಹಲವು ದಶಕಗಳಿಂದ ಹೋರಾಟ ನಡೆಸಿದರೂ ಸರ್ಕಾರ ಗಂಭಿರವಾಗಿ ಪರಿಗಣಿಸಿಲ್ಲ ಎಂದು ತಿಳಿಸಿದ್ದಾರೆ.ಶೇ. ೮೨ರಷ್ಟು ಅರಣ್ಯ ಭೂಮಿ ಹೊಂದಿದ ಜಿಲ್ಲೆಯಲ್ಲಿ ಅರ್ಹ ಅರಣ್ಯ ಭೂಮಿ ಸಾಗುವಳಿದಾರರಿಗೆ ಮಂಜೂರಿ ನೀಡದೇ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ೧೯೭೫ರ ಪೂರ್ವದಲ್ಲಿ ಸಕ್ರಮ ಮಾಡುವ ಕಾನೂನಿನಲ್ಲಿ ಅವಕಾಶವಿದ್ದರೂ ಅದನ್ನು ಮಾಡದೇ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರರೊಂದಿಗೂ ನಿಯೋಗ ಸುದೀರ್ಘವಾಗಿ ಚರ್ಚಿಸಿದ್ದು, ಜಿಲ್ಲೆಯ ಪ್ರಮುಖ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದ ಮೇಲೆ ಪ್ರಭಾವ ಬೀರಬೇಕೆಂದು ಮನವಿ ಮಾಡಿದೆ.ನಿಯೋಗದಲ್ಲಿ ಹೋರಾಟ ಸಮಿತಿಯ ರಮಾನಂದ ನಾಯ್ಕ ಅಚಿವೆ, ರಾಮದಾಸ ಎಚ್. ನಾಯಕ, ನಾಗಯ್ಯ ಶೇರುಗಾರ, ಶಂಕರ ಕೊಡಿಯಾ, ರಘುಪತಿ ಹೆಬ್ಬಾರ, ನಾರಾಯಣ ಮುಕ್ತಿ, ಮಹಾಬಲ ಶೇರುಗಾರ, ಮಹದೇವ ನಾಯ್ಕ, ಮಂಜುನಾಥ ಶಾಸ್ತ್ರಿ, ರಘು ಮರಾಠಿ ಮತ್ತಿತರ ಪ್ರಮುಖರು ಇದ್ದರು.