ಹಿರಿಯೂರು ಟ್ರಾಫಿಕ್ ನಿಯಂತ್ರಣ ಮಾಡಲು ಆಗ್ರಹ

| Published : Dec 10 2024, 12:31 AM IST

ಸಾರಾಂಶ

ನಗರದ ಟಿಬಿ ವೃತ್ತದ ಬಳಿ ಇರುವ ಅಂಡರ್ ಪಾಸ್ ನ ಹತ್ತಿರ ಟ್ರಾಫಿಕ್ ನಿಯಂತ್ರಣಕ್ಕೆ ಒಬ್ಬರು ಪೊಲೀಸ್ ಸಿಬ್ಬಂದಿಯನ್ನು ಆಯೋಜನೆ ಮಾಡಬೇಕು. ಚರ್ಚ್ ರಸ್ತೆ ಹಾಗೂ ಸಂಜೀವಿನಿ ಆಸ್ಪತ್ರೆ ರಸ್ತೆಯನ್ನು ಒನ್ ವೇ ಮಾಡಬೇಕೆಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾ ಮತ್ತು ತಾಲೂಕು ಘಟಕಗಳು ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ಟಿಬಿ ವೃತ್ತದ ಬಳಿ ಇರುವ ಅಂಡರ್ ಪಾಸ್ ನ ಹತ್ತಿರ ಟ್ರಾಫಿಕ್ ನಿಯಂತ್ರಣಕ್ಕೆ ಒಬ್ಬರು ಪೊಲೀಸ್ ಸಿಬ್ಬಂದಿಯನ್ನು ಆಯೋಜನೆ ಮಾಡಬೇಕು. ಚರ್ಚ್ ರಸ್ತೆ ಹಾಗೂ ಸಂಜೀವಿನಿ ಆಸ್ಪತ್ರೆ ರಸ್ತೆಯನ್ನು ಒನ್ ವೇ ಮಾಡಬೇಕೆಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾ ಮತ್ತು ತಾಲೂಕು ಘಟಕಗಳು ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.

ಚರ್ಚ್ ರಸ್ತೆಯಲ್ಲಿ ಶಾಲೆ ಇರುವುದರಿಂದ ಶಾಲಾ ಮಕ್ಕಳಿಗೆ ಮತ್ತು ಅಲ್ಲಿ ವಾಸವಿರುವ ಮನೆಗಳಿಗೆ ಬಹಳ ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನಗಳನ್ನು ಸಹ ಅದೇ ಇಕ್ಕಟ್ಟಾದ ರಸ್ತೆಯಲ್ಲಿ ಪಾರ್ಕಿಂಗ್ ಮಾಡುವುದರಿಂದ ಪ್ರತಿದಿನವೂ ಅಲ್ಲಿ ಟ್ರಾಫಿಕ್ ಕಿರಿಕಿರಿಯನ್ನು ಸಾರ್ವಜನಿಕರು ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಸಂಜೀವಿನಿ ಆಸ್ಪತ್ರೆ ರಸ್ತೆಯು ಸಹ ಅತ್ಯಂತ ಚಿಕ್ಕದಾಗಿದ್ದು, ಸದಾ ವಾಹನಗಳ ಓಡಾಟದಿಂದ ಅಲ್ಲಿಯೂ ಸುಗಮ ಸಂಚಾರ ಅಸಾಧ್ಯವಾಗಿದೆ. ಹಾಗಾಗಿ ಈ ಎರಡು ರಸ್ತೆಗಳನ್ನು ಒನ್ ವೇ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಟಿಬಿ ವೃತದ ಬಳಿ ಇರುವ ಅಂಡರ್ ಪಾಸ್ ನ ಕೆಳಗಡೆ ನಾಲ್ಕು ಕಡೆಯಿಂದ ಬರುವ ವಾಹನಗಳು ಒಂದೇ ಬಳಿ ಸೇರುವುದರಿಂದ ಹೆಚ್ಚಿನ ಟ್ರಾಫಿಕ್ ಜಾಮ್ ಆಗುತ್ತಿದ್ದು, ಇಲ್ಲಿ ಕಡ್ಡಾಯವಾಗಿ ಒಬ್ಬರು ಪೊಲೀಸ್ ಸಿಬ್ಬಂದಿ ಅವಶ್ಯಕತೆ ಇದೆ ಎಂದು ತಿಳಿಸಿದರು.

ನಗರ ಭಾಗದ ಟ್ರಾಫಿಕ್ ಕಿರಿಕಿರಿಗೆ ಸಂಬಂಧಪಟ್ಟ ನಗರಸಭೆ ಮತ್ತು ಪೊಲೀಸ್ ಇಲಾಖೆ ತುರ್ತು ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈಗಾಗಲೇ ಪಾದಚಾರಿ ರಸ್ತೆಯನ್ನು ಸಹ ದಾಟಿ ಬಂದು ರಸ್ತೆಯಲ್ಲೇ ತರಕಾರಿ ಅಂಗಡಿ, ಹಣ್ಣಿನ ಅಂಗಡಿ, ಗೋಬಿ ಪಾನಿಪೂರಿ ಅಂಗಡಿಗಳನ್ನು ಇಟ್ಟುಕೊಂಡು ಪಾದಚಾರಿಗಳು ರಸ್ತೆಯಲ್ಲೇ ನಡೆದು ಸಾಗುವ ದೃಶ್ಯ ಪ್ರತಿನಿತ್ಯ ಕಣ್ಣಿಗೆ ಕಾಣುತ್ತಿವೆ ಎಂದು ಹೇಳಿದರು.

ದುರಂತವೆಂದರೆ ಸಾರ್ವಜನಿಕರು ಈ ಪರಿ ಟ್ರಾಫಿಕ್ ಜಾಮ್ ಬಗ್ಗೆ ಪದೇ ಪದೇ ಮನವಿ ಮಾಡುತ್ತಿದ್ದರೂ ಸಹ ನಗರಸಭೆಯವರು ಹೊಸ ಹೊಸ ತಳ್ಳುಗಾಡಿ, ತರಕಾರಿ ಅಂಗಡಿಗಳು ಪಾದಚಾರಿ ರಸ್ತೆ ಮೇಲೆ ನಿಲ್ಲಲು ಅನುವು ಮಾಡಿಕೊಡುತ್ತಿದ್ದಾರೆ. ನೆಹರೂ ಮೈದಾನದ ಒಳಗಿದ್ದ ಗೋಬಿ ಪಾನಿಪುರಿಯ ಸುಮಾರು 20 ಕ್ಕೂ ಹೆಚ್ಚು ಅಂಗಡಿಗಳನ್ನು ಒಕ್ಕಲೆಬ್ಬಿಸಿದ್ದು ಅವರೀಗ ಮತ್ತೆ ರಸ್ತೆಯ ಆ ಕಡೆ ಈ ಕಡೆ ಬಂದು ವ್ಯಾಪಾರಕ್ಕೆ ನಿಂತಿದ್ದಾರೆ. ಟ್ರಾಫಿಕ್ ಕಡಿಮೆ ಮಾಡುವವರೆ ಟ್ರಾಫಿಕ್ ಹೆಚ್ಚಳಕ್ಕೆ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ. ರಾಮಚಂ, ಮುಜಾಯಿದ್, ಹಿರಿಯೂರು ತಾಲೂಕು ಅಧ್ಯಕ್ಷ ರಾಘವೇಂದ್ರ ಆರ್, ಗೌರವಾಧ್ಯಕ್ಷ ಗೋವಿಂದಪ್ಪ, ರಂಗಸ್ವಾಮಿ, ಓಂಕಾರಪ್ಪ, ಲಕ್ಷ್ಮಣ್ ರಾವ್, ದಾದಾಪೀರ್, ಇಬ್ರಾಹಿಂ, ತಿಪ್ಪೇಶ್ ಮುಂತಾದವರು ಉಪಸ್ಥಿತರಿದ್ದರು.