ನಾಮಫಲಕಗಳಲ್ಲಿ ಕನ್ನಡ ಬಳಕೆಗೆ ಆಗ್ರಹ

| Published : Dec 19 2023, 01:45 AM IST

ಸಾರಾಂಶ

ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಜನಸೈನ್ಯ ಸಂಘಟನೆ ಮುಖಂಡರಿಂದ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಬಳ್ಳಾರಿ: ನಗರದ ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿರುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಸೈನ್ಯ ಸಂಘಟನೆಯ ಮುಖಂಡರು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ನಗರದ ಬಹುತೇಕ ವ್ಯಾಪಾರ- ವಹಿವಾಟು ಮತ್ತು ಸಂಘ- ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡದ ಬದಲು ಆಂಗ್ಲ ಭಾಷೆಗಳೇ ರಾರಾಜಿಸುತ್ತಿವೆ. ಈ ಕುರಿತು ಹಲವು ಬಾರಿ ಹೋರಾಟ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ವರ್ಷಕ್ಕೊಮ್ಮೆ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾಧಿಕಾರಿಗಳು ಪೂರ್ವಭಾವಿ ಸಭೆ ಕರೆದಾಗ ಈ ವಿಷಯ ಕುರಿತು ಪ್ರಸ್ತಾಪಿಸಿದಾಗಲೂ ಕನ್ನಡದ ಆದ್ಯತೆಯ ಕೆಲಸವಾಗಿಲ್ಲ. ಕನ್ನಡ ಬಳಕೆ ವಿಚಾರದಲ್ಲಿ ಮಹಾನಗರ ಪಾಲಿಕೆ ಅತ್ಯಂತ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸಂಘಟನೆಯ ಮುಖಂಡರು ದೂರಿದರು.

ಕರ್ನಾಟಕ ಜನಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ಕೆ. ಎರಿಸ್ವಾಮಿ ಮಾತನಾಡಿ, ಡಿಸೆಂಬರ್ ಅಂತ್ಯದೊಳಗೆ ನಗರದ ಎಲ್ಲ ನಾಮಫಲಕಗಳಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಶೇ. 70ರಷ್ಟು ಕನ್ನಡ ಕಡ್ಡಾಯವಾಗಿಬೇಕು. ಇಲ್ಲದಿದ್ದಲ್ಲಿ ಜನವರಿ ಮೊದಲ ವಾರದಲ್ಲಿ ಕರ್ನಾಟಕ ಜನಸೈನ್ಯದ ವತಿಯಿಂದ ನಾಮಫಲಕಗಳಿಗೆ ಕಪ್ಪು ಮಸಿ ಬಳೆಯಲಾಗುವುದು ಎಂದು ಎಚ್ಚರಿಸಿದರು.

ಸಂಘಟನೆಯ ಪ್ರಮುಖರಿಂದ ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತರು, ಕನ್ನಡ ಬಳಕೆಯ ಬಗ್ಗೆ ಪಾಲಿಕೆ ಕಟ್ಟುನಿಟ್ಟಿನ ಕ್ರಮ ವಹಿಸಲಿದೆ ಎಂದು ಭರವಸೆ ನೀಡಿದರು. ಸಂಘಟನೆಯ ಉಪಾಧ್ಯಕ್ಷ ಬಿ. ಹೊನ್ನೂರಪ್ಪ, ಫಯಾಜ್ ಬಾಷಾ, ಪ್ರದೀಪ್ ಉಂಡೇಕರ್, ನಾಸೀರ್, ಮೊಹಮ್ಮದ್ ಅಲಿ, ಹೊನ್ನೂರ್ ಸ್ವಾಮಿ, ಸುಹೆಲ್, ಇಬ್ರಾಹಿಂ, ಕೈಸರ್, ಫಿರೋಜ್ ಖಾನ್ , ವಲಿಸಾಬ್ ಮತ್ತಿತರರಿದ್ದರು.