ಅಬಕಾರಿ ಇಲಾಖೆ ಹೊರಡಿಸಿರುವ ಸುತ್ತೋಲೆ ಹಿಂಪಡೆಯಲು ಆಗ್ರಹ

| Published : Feb 26 2025, 01:03 AM IST

ಅಬಕಾರಿ ಇಲಾಖೆ ಹೊರಡಿಸಿರುವ ಸುತ್ತೋಲೆ ಹಿಂಪಡೆಯಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರಕ್ಷಣಾ ಮದ್ಯವನ್ನು ಶುಭ ಸಮಾರಂಭಗಳಲ್ಲಿ ಉಪಯೋಗಿಸಲು ಅನುವು ಮಾಡಿಕೊಡಬೇಕು ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ ಒತ್ತಾಯಿಸಿದೆ.

ಮಡಿಕೇರಿ : ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆಯ ಉಪ ಆಯುಕ್ತರು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆದು ರಕ್ಷಣಾ ಮದ್ಯವನ್ನು ಶುಭ ಸಮಾರಂಭಗಳಲ್ಲಿ ಉಪಯೋಗಿಸಲು ಅನುವು ಮಾಡಿಕೊಡಬೇಕು ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ ಒತ್ತಾಯಿಸಿದೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಕಾರ್ಯದರ್ಶಿ ಓಡಿಯಂಡ ಚಿಂಗಪ್ಪ, ಜಿಲ್ಲೆಯಲ್ಲಿ ರಕ್ಷಣಾ ಮದ್ಯ, ಹೊರ ರಾಜ್ಯದ ಮದ್ಯ, ನಕಲಿ ಮತ್ತು ಅಕ್ರಮ ಸರಬರಾಜು ಆಗುತ್ತಿದೆ ಎಂಬ ಕಾರಣಕ್ಕೆ ಶುಭ ಸಮಾರಂಭಗಳಿಗೆ ಮದ್ಯ ಸರಬರಾಜು ಮಾಡಲು ಸನ್ನದು ಪಡೆಯುವುದು ಕಡ್ಡಾಯ ಎಂದು ಇಲಾಖೆ ಸುತ್ತೋಲೆ ಹೊರಡಿಸಿರುವುದು ಖಂಡನೀಯ ಎಂದರು. ಜಿಲ್ಲೆಯಲ್ಲಿ 8-10 ಸಾವಿರ ಮಾಜಿ ಸೈನಿಕರಿದ್ದಾರೆ, ಅವರಿಗೂ ಕುಟುಂಬಗಳಿವೆ. ತಮ್ಮ ಮಕ್ಕಳ ಶುಭ ಕಾರ್ಯಕ್ರಮಕ್ಕೆ ಮದ್ಯ ಸಂಗ್ರಹ ಮಾಡಿಕೊಳ್ಳುತ್ತಾರೆ. ಇದನ್ನು ಅಕ್ರಮ ಮದ್ಯ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಜಿಲ್ಲೆಯ ವಿವಿಧೆಡೆ ಕಳ್ಳಭಟ್ಟಿ, ಅಕ್ರಮ ಮದ್ಯ ಸರಬರಾಜಾಗುತ್ತಿದೆ ಅದನ್ನು ಮೊದಲು ತಡೆಹಿಡಿಯುವ ಕೆಲಸ ಮಾಡಲಿ ಎಂದು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ ಮಾತನಾಡಿ, ಕೊಡಗಿನಲ್ಲಿ ಪ್ರತಿಯೊಂದು ಶುಭ ಸಮಾರಂಭಗಳಲ್ಲಿ ಮದ್ಯ ಬಳಕೆ ಮಾಡಲಾಗುತ್ತದೆ. ಇದಕ್ಕೆಲ್ಲಾ ವಿಶೇಷ ಅನುಮತಿ ಪಡೆಯಬೇಕಾ ಎಂದು ಪ್ರಶ್ನಿಸಿದರು. ನಾವು ಕಳ್ಳಬಟ್ಟಿ ಮಾರುತ್ತಿಲ್ಲ. ದೇಶದ ರಕ್ಷಣೆ ಮಾಡಿದಕ್ಕೆ ನಮಗೆ ಸರ್ಕಾರ ರಕ್ಷಣಾ ಮದ್ಯವನ್ನು ನೀಡುತ್ತಿದೆ. ಅದನ್ನು ನಮ್ಮ ಶುಭ ಕಾರ್ಯಕ್ರಮಗಳಿಗೆ ಬಳಸಲು ಅನುಮತಿ ಪಡೆಯುವಂತೆ ಹೇಳುತ್ತಿರುವುದು ಮಾಜಿ ಸೈನಿಕರಿಗೆ ತೋರುವ ಅಗೌರವವಾಗಿದೆ ಎಂದು ಆರೋಪಿಸಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ ಮಾತನಾಡಿ, ಪರವಾನಗಿ ಇಲ್ಲದ ಮದ್ಯ, ಅಕ್ರಮ ಮದ್ಯಗಳು ಜಿಲ್ಲೆಯ ಒಳಭಾಗಕ್ಕೆ ನುಸುಳದಂತೆ ಮೊದಲು ಇಲಾಖೆಗಳು ಎಚ್ಚರವಹಿಸಬೇಕು. ನಕಲಿ ಮದ್ಯ ಹಿಡಿಯಲು ಚೆಕ್ ಪೋಸ್ಟ್ ನಲ್ಲಿ ಕಠಿಣವಾಗಿ ಕಾರ್ಯನಿರ್ವಹಿಸಲಿ. ಅದನ್ನು ಬಿಟ್ಟು ಕೊಡಗಿನ ಜನರಿಗೆ ಮಾನಸಿಕ ಹಿಂಸೆ ನೀಡಿದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಮಾಜಿ ಸೈನಿಕರಾದ ಎಚ್.ಆರ್.ವಾಸಪ್ಪ, ಕೆ.ಮಂದಣ್ಣ ಹಾಗೂ ಹರೀಶ್ ಸುದ್ದಿಗೋಷ್ಠಿಯಲ್ಲಿದ್ದರು.