ಸಿವಿಲ್ ಎಂಜಿನಿಯರಿಂಗ್ ಕಾಯಿದೆ ಜಾರಿಗೆ ಜಿಲ್ಲಾ ಸಂಘದಿಂದ ಆಗ್ರಹ

| Published : Feb 08 2024, 01:35 AM IST

ಸಿವಿಲ್ ಎಂಜಿನಿಯರಿಂಗ್ ಕಾಯಿದೆ ಜಾರಿಗೆ ಜಿಲ್ಲಾ ಸಂಘದಿಂದ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಸಿವಿಲ್ ಎಂಜಿನಿಯರಿಂಗ್ ವೃತ್ತಿಯನ್ನು ಹೊರತುಪಡಿಸಿ ವಕೀಲ, ವೈದ್ಯಕೀಯ, ಲೆಕ್ಕಪರಿಶೋಧಕ ಸೇರಿದಂತೆ ಇನ್ನಿತರ ವೃತ್ತಿಗಳು ಕಾನೂನಾತ್ಮಕವಾಗಿ ಗುರುತಿಸಲ್ಪಟ್ಟಿವೆ. ಶಾಸನಬದ್ಧ ಮಂಡಳಿಗಳಿಂದ ನಿಯಂತ್ರಿಸಲ್ಪಡುತ್ತಿವೆ. ಅಂತಹದೊಂದು ವೃತ್ತಿಪರತೆಯ ಕಾನೂನಾತ್ಮಕ ಮತ್ತು ಶಾಸನಬದ್ಧ ಮಂಡಳಿ ಸಿವಿಲ್ ಎಂಜಿನಿಯರಿಂಗ್ ವೃತ್ತಿಗೆ ಇಲ್ಲ. ಇದು ಭಾರತದ ಪ್ರಗತಿಗೆ ತೊಡಕಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿನಿಯರ್‌ಗಳ ಕಾಯಿದೆ ಜಾರಿಗೊಳಿಸುವಂತೆ ಜಿಲ್ಲಾ ವೃತ್ತಿಪರ ಸಿವಿಲ್ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ಎಸ್.ನವೀನ್ ಒತ್ತಾಯಿಸಿದರು.

ದೇಶದ ಪ್ರಗತಿಯಲ್ಲಿ ವಿಶೇಷವಾಗಿ ಆರ್ಥಿಕತೆ, ಸುರಕ್ಷತೆ ಮತ್ತು ಸುಸ್ಥಿರತೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ವೃತ್ತಿಯ ಕೊಡುಗೆ ಅಪಾರವಾಗಿದೆ. ಈ ವೃತ್ತಿಪರ ಕೊಡುಗೆಗಳಿಂದ ಭಾರತ ವಿಶ್ವದಲ್ಲಿ ಐದನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಸಿವಿಲ್ ಎಂಜಿನಿಯರಿಂಗ್ ಉದ್ಯಮ ಭಾರತದಲ್ಲಿ ಎರಡನೇ ಅತಿ ದೊಡ್ಡ ಉದ್ಯೋಗಗಳನ್ನು ಸೃಷ್ಟಿಸುವ ಉದ್ಯಮಶೀಲವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಸ್ತುತ ಸಿವಿಲ್ ಎಂಜಿನಿಯರಿಂಗ್ ವೃತ್ತಿಯನ್ನು ಹೊರತುಪಡಿಸಿ ವಕೀಲ, ವೈದ್ಯಕೀಯ, ಲೆಕ್ಕಪರಿಶೋಧಕ ಸೇರಿದಂತೆ ಇನ್ನಿತರ ವೃತ್ತಿಗಳು ಕಾನೂನಾತ್ಮಕವಾಗಿ ಗುರುತಿಸಲ್ಪಟ್ಟಿವೆ. ಶಾಸನಬದ್ಧ ಮಂಡಳಿಗಳಿಂದ ನಿಯಂತ್ರಿಸಲ್ಪಡುತ್ತಿವೆ. ಅಂತಹದೊಂದು ವೃತ್ತಿಪರತೆಯ ಕಾನೂನಾತ್ಮಕ ಮತ್ತು ಶಾಸನಬದ್ಧ ಮಂಡಳಿ ಸಿವಿಲ್ ಎಂಜಿನಿಯರಿಂಗ್ ವೃತ್ತಿಗೆ ಇಲ್ಲ. ಇದು ಭಾರತದ ಪ್ರಗತಿಗೆ ತೊಡಕಾಗಿದೆ ಎಂದು ವಿಷಾದಿಸಿದರು.

ನಿಯಂತ್ರಣವಿಲ್ಲದ ಇಂತಹ ಪರಿಸ್ಥಿತಿಗಳಿಂದಾಗಿ ಸಿವಿಲ್ ಎಂಜಿನಿಯರಿಂಗ್ ಉದ್ಯಮ ಅರ್ಹತೆ ಹೊಂದಿಲ್ಲದ ವ್ಯಕ್ತಿಗಳಿಂದ ತುಂಬಿಕೊಂಡಿದೆ. ಇದರಿಂದಾಗಿ ಅಸುರಕ್ಷಿತ, ಸುಸ್ಥಿರವಲ್ಲದ ಮತ್ತು ಅಸಮರ್ಥನೀಯ ಕಟ್ಟಡಗಳೂ ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಸಿವಿಲ್ ಎಂಜಿನಿಯರಿಂಗ್ ವೃತ್ತಿಯಲ್ಲಿರುವ ಅಸಮರ್ಥನೀಯ ನಿಯಮಗಳಿಂದ ಕೆಳ ಮತ್ತು ಮಧ್ಯಮವರ್ಗದ ಶೇ.೯೮ರಷ್ಟು ಜನರು ಸಂಕಷ್ಟಗಳನ್ನು ಎದುರಿಸುವಂತಾಗಿದೆ ಎಂದರು.

ಚಿಕ್ಕದಾದ ನಿವೇಶನದಲ್ಲಿ ಮನೆ ಕಟ್ಟಲು ಬೈಲಾಗಳನ್ನು ಉಲ್ಲಂಘನೆ ಮಾಡಿ ಕಟ್ಟುವುದು ಅನಿವಾರ್ಯವಾಗಿದೆ. ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗಳು, ಎಲ್ಲೆಂದರಲ್ಲಿ ಬೇಕಾಬಿಟ್ಟಿ ತಲೆಎತ್ತುತ್ತಿರುವ ಬಡಾವಣೆಗಳು, ಮಳೆಗಾಲದಲ್ಲಿ ರಸ್ತೆಗಳು ಕಾಲುವೆಗಳಾಗಿ ಪರಿವರ್ತನೆಯಾಗುತ್ತಿರುವುದಕ್ಕೆ ಸಾಕ್ಷಿಯಾಗಿವೆ. ಈ ಎಲ್ಲ ಕಾರಣಗಳಿಂದ ಸಮಾಜದಲ್ಲಿ ಮೂಲ ಸೌಕರ್ಯಗಳು ಕಳಪೆಮಟ್ಟದ್ದಾಗಿ ನಲುಗುತ್ತಿವೆ ಎಂದರು.

ಈ ಅವ್ಯವಸ್ಥೆಯಿಂದ ಸಿವಿಲ್ ಎಂಜಿನಿಯರ್‌ಗಳ ವೃತ್ತಿಗೆ ಕೆಟ್ಟ ಹೆಸರು ಬಂದಿರುವುದಲ್ಲದೆ, ಈ ವೃತ್ತಿಯನ್ನು ಆದ್ಯತೆಯ ವೃತ್ತಿಯನ್ನಾಗಿ ತೆಗೆದುಕೊಳ್ಳುವವರ ಸಂಖ್ಯೆ ಇಳಿಮುಖವಾಗುತ್ತಿದೆ. ವಿದ್ಯಾಲಯಗಳಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗವನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವೃತ್ತಿಪರತೆಯ ಮಹತ್ವದ ಬಗ್ಗೆ ಅರಿತುಕೊಂಡ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಗ್ಯಾಟ್ ೨೦೦೧ರಲ್ಲಿ ಒಡಂಬಡಿಕೆಯೊಂದನ್ನು ಸಿದ್ಧಪಡಿಸಿತು. ಅದರಂತೆ ವಿಶ್ವಸಂಸ್ಥೆಯ ಎಲ್ಲಾ ರಾಷ್ಟ್ರಗಳು ತಮ್ಮ ತಮ್ಮ ದೇಶ, ರಾಜ್ಯಗಳ ಪರಿಮಿತಿಯಲ್ಲಿ ವೃತ್ತಿಪರತೆಯನ್ನು ಕಾನೂನಾತ್ಮಕ ಮತ್ತು ಶಾಸನಬದ್ಧ ಕಾಯ್ದೆಗಳ ಅಡಿಯಲ್ಲಿ ತರಲು ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದವು. ಅದರಂತೆ ಎಲ್ಲ ಸದಸ್ಯ ರಾಷ್ಟ್ರಗಳು ತಮ್ಮ ತಮ್ಮ ದೇಶಗಳಲ್ಲಿನ ವೃತ್ತಿಗಳನ್ನು ಅವರದೇ ಆದ ರೀತಿಯಲ್ಲಿ ಕಾನೂನಾತ್ಮಕ ಕಾಯಿದೆಗಳ ಅಡಿಯಲ್ಲಿ ಎಲ್ಲ ವೃತ್ತಿಗಳನ್ನು ತಂದಿವೆ. ಆದರೆ, ಭಾರತದಲ್ಲಿ ಮಾತ್ರ ಸಿವಿಲ್ ಎಂಜಿನಿಯರಿಂಗ್ ವೃತ್ತಿಯನ್ನು ಬಿಟ್ಟು ಉಳಿದೆಲ್ಲಾ ವೃತ್ತಿಗಳನ್ನು ಮೇಲೆ ತಿಳಿಸಿದಂಥೆ ಕಾನೂನಾತ್ಮಕವಾಗಿ ಗುರುತಿಸಲ್ಪಟ್ಟು ಶಾಸನಬದ್ಧ ರೀತಿಯಲ್ಲಿ ನಿಯಂತ್ರಿಸಲ್ಪಟ್ಟಿವೆ. ಸಿವಿಲ್‌ಇಂಜಿನಿಯರಿಂಗ್ ವೃತ್ತಿಯನ್ನು ಮಾತ್ರ ಇದರಿಂದ ಹೊರತುಪಡಿಸಿ ಇಲ್ಲಿಯವರೆಗೆ ವೃತ್ತಿಯನ್ನು ಕಾನೂನಾತ್ಮಕವಾಗಿ ಪರಿಚಯಿಸುವ ವ್ಯವಸ್ಥೆ ಜಾರಿಯಾಗಿಲ್ಲ. ಕರ್ನಾಟಕದ ೫ ಲಕ್ಷ ವೃತ್ತಿಪರ ಸಿವಿಲ್ ಎಂಜಿನಿಯರ್‌ಗಳು ಈ ಕಾಯಿದೆಯನ್ನು ಆದಷ್ಟು ಬೇಗ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.

ಗೋಷ್ಠಿಯಲ್ಲಿ ಡಾ.ಡಿ.ಎಸ್.ಸಂದೀಪ್‌ಕುಮಾರ್, ಜೆ.ಆರ್.ಮಯೂರ್, ಕೆ.ಜೆ.ಅನಿಲ್‌ಕುಮಾರ್, ಕೆ.ಎಸ್.ಪರೀಕ್ಷಿತ್ ರಾಘವ್, ಡಿ.ಆರ್.ಕಿರಣ್‌ಕುಮಾರ್, ಸಿದ್ದಯ್ಯ ಇದರರಿದ್ದರು.