ಸಾರಾಂಶ
ಲೈಫ್ ಗಾರ್ಡ್ ಸಿಬ್ಬಂದಿ ಮೇಲೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜಯಂತ ಹಲ್ಲೆ ಮಾಡಿದ್ದು, ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯ ವಿವಿಧ ಕಡೆಯಿಂದ ಬಂದಿದ್ದ ಲೈಫ್‌ಗಾರ್ಡ್ ಸಿಬ್ಬಂದಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಿಗೆ ಸೋಮವಾರ ಮನವಿ ನೀಡಿದರು.
ಕಾರವಾರ: ಜಿಲ್ಲೆಯಲ್ಲಿನ ಪ್ರವಾಸಿತಾಣಗಳಲ್ಲಿ ಜೀವರಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಲೈಫ್ ಗಾರ್ಡ್ ಸಿಬ್ಬಂದಿ ಮೇಲೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜಯಂತ ಹಲ್ಲೆ ಮಾಡಿದ್ದು, ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯ ವಿವಿಧ ಕಡೆಯಿಂದ ಬಂದಿದ್ದ ಲೈಫ್‌ಗಾರ್ಡ್ ಸಿಬ್ಬಂದಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಿಗೆ ಸೋಮವಾರ ಮನವಿ ನೀಡಿದರು.
೨೦೧೬ರಿಂದ ಜೀವ ರಕ್ಷಕ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತ ಬಂದಿದ್ದು, ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರವಾಸಿಗರ ರಕ್ಷಣೆ ಮಾಡಲಾಗಿದೆ. ಇದುವರೆಗೂ ೩೫೦ಕ್ಕೂ ಹೆಚ್ಚು ಪ್ರವಾಸಿಗರ ಜೀವ ರಕ್ಷಣೆ ಮಾಡಿದ್ದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದೇವೆ. ಹೀಗಿದ್ದಾಗ್ಯೂ ಭಾನುವಾರ ಕರ್ತವ್ಯ ನಿರತರಾಗಿದ್ದ ಸಮಯದಲ್ಲಿ ಏಕಾಏಕಿಯಾಗಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ ಹೊನ್ನಾವರದ ಇಕೋ ಕಡಲ ತೀರಕ್ಕೆ ಬಂದಿದ್ದು, ಅಲ್ಲಿನ ಲೈಫ್ ಗಾರ್ಡ್ ಸಿಬ್ಬಂದಿಗೆ ಅವಾಚ್ಯ ಶಬ್ಧದಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ಇಷ್ಟು ವರ್ಷವಾದರೂ ಯಾವ ಅಧಿಕಾರಿಗಳು ಲೈಫ್ ಗಾರ್ಡ್ ಸಿಬ್ಬಂದಿಗೆ ಹಲ್ಲೆ ಮಾಡಿರಲಿಲ್ಲ ಎಂದರು.ಲೈಫ್ ಗಾರ್ಡ್ ಸಿಬಂದಿಗೆ ಯಾವುದೇ ರೀತಿಯ ಆರೋಗ್ಯ ವಿಮೆಯಾಗಲಿ, ಭತ್ಯೆಯಾಗಲಿ ಮೂಲಭೂತ ಸೌಕರ್ಯಗಳಾಗಲಿ ದೊರಕುತ್ತಿಲ್ಲ. ವೇತನ ಹೆಚ್ಚಳದ ಕುರಿತು ಮನವಿ ಮಾಡಿಕೊಂಡಿದ್ದರೂ ಯಾವುದೇ ರೀತಿಯ ಧನಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.