ಕನ್ನಡಪ್ರಭ ವಾರ್ತೆ ಮದ್ದೂರು
ಮಾಜಿ ಸಿಎಂ, ಕೀರ್ತಿಶೇಷ ಡಾ.ಎಸ್.ಎಂ.ಕೃಷ್ಣರ 94ನೇ ವರ್ಷದ ಜನ್ಮ ದಿನೋತ್ಸವದ ಅಂಗವಾಗಿ ಶಾಸಕ ಕೆ.ಎಂ.ಉದಯ್ ರಿಗೆ ಬುಧವಾರ ಎಸ್.ಎಂ.ಕೃಷ್ಣ ಆಡಳಿತ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.ಚುಂಚಶ್ರೀ ಗೆಳೆಯರ ಬಳಗ, ಶ್ರೀ ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘ ಹಾಗೂ ಕರ್ನಾಟಕ ಶೋಷಿತ ಸಮುದಾಯದ ವೇದಿಕೆ ವತಿಯಿಂದ ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅನುಪಸ್ಥಿತಿಯಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಶ್ರೀಗಳು ಶಾಸಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.
ನಂತರ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ವಿಧಾನಸಭೆ, ವಿಧಾನ ಪರಿಷತ್ತು, ರಾಜ್ಯಸಭೆ ಮತ್ತು ಲೋಕಸಭೆಯ 4 ಸದನಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಎಸ್.ಎಂ.ಕೃಷ್ಣ ಅವರು ಮಂಡ್ಯ ಜಿಲ್ಲೆಯ ಹೆಸರನ್ನು ವಿಶ್ವಖ್ಯಾತಿಗೊಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ಪ್ರಶಂಸಿಸಿದರು.ಕಾಂಗ್ರೆಸ್ ಪಕ್ಷ ಹೀನಾಯ ಸ್ಥಿತಿಯಲ್ಲಿದ್ದಾಗ ಕೃಷ್ಣ ಅವರು ಪಾಂಚ್ಯಜನ್ಯ ಮೊಳಗಿಸುವ ಮೂಲಕ ರಾಜ್ಯದಲ್ಲಿ 132 ಸ್ಥಾನ ಗಳಿಸುವುದಕ್ಕೆ ಕಾರಣೀಭೂತರಾಗಿದ್ದಾರೆ. ರಾಜ್ಯದ 14ನೇ ಮುಖ್ಯಮಂತ್ರಿ ಆಗಿ ಆಯ್ಕೆಯಾಗುವ ಮೂಲಕ ತಮ್ಮ ದೂರ ದೃಷ್ಟಿಯ ಫಲವಾಗಿ ಕಾವೇರಿ ನೀರಾವರಿ ನಿಗಮ, ಯಶಸ್ವಿನಿ ಯೋಜನೆ ಸೇರಿ ಅನೇಕ ಜನಪರ ಯೋಜನೆಗಳು ಅಲ್ಲದೆ ಬೆಂಗಳೂರಿಗೆ ಆಧುನಿಕ ಸ್ಪರ್ಶ ನೀಡುವ ಮೂಲಕ ಐಟಿ ಬಿಟಿ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಪಡೆಯಲು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಎಸ್.ಎಂಕೆಗೆ ಕರ್ನಾಟಕ ರತ್ನ ನೀಡಲು ಒತ್ತಾಯಿಸಿ:
ನಂತರ ಡಾ.ನಿಶ್ಚಲಾನಂದ ಶ್ರೀಗಳು ಮಾತನಾಡಿ, ಎಸ್.ಎಂ. ಕೃಷ್ಣರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಬೆಂಗಳೂರು ನಗರ ನಿರ್ಮಾಣದಲ್ಲಿ ಕೆಂಪೇಗೌಡರ ಪಾತ್ರವಿದ್ದರೆ, ಎಸ್.ಎಂ.ಕೃಷ್ಣ ಅವರು ಬೆಂಗಳೂರು ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಶ್ರಮ ಅಗಾಧವಾಗಿದೆ ಎಂದು ತಿಳಿಸಿದರು.
ಹೀಗಾಗಿ ಶಾಸಕರಾದ ಕೆ.ಎಂ.ಉದಯ್ ಹಾಗೂ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಕನ್ನಡ ರಾಜ್ಯೋತ್ಸವದಲ್ಲಿ ಎಸ್.ಎಂ.ಕೃಷ್ಣರಿಗೆ ಮರಣೋತ್ತರವಾಗಿ ಕರ್ನಾಟಕ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಸಲಹೆ ನೀಡಿದರು.ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ ಪ್ರಾಸ್ತಾವಿಕ ಭಾಷಣ ಮಾಡಿದರು. ಮನ್ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ರಾಜ್ಯ ಶೋಷಿತ ಸಮುದಾಯ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಕಂಠಿ, ಇತಿಹಾಸ ಸಂಶೋಧಕ ತೈಲೂರು ವೆಂಕಟಕೃಷ್ಣ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಟಿ.ರವಿಕುಮಾರ್, ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ, ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ರವಿ ಹಲವರು ಭಾಗವಹಿಸಿದ್ದರು.