ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

| Published : Mar 05 2025, 12:35 AM IST

ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಜಿಲ್ಲೆಗೆ ಬಂದಿರುವ ಕಾರ್ಖಾನೆಗಳಿಂದ ಜನರ ಆರೋಗ್ಯ ಮತ್ತು ಕೃಷಿ ಭೂಮಿಯೂ ಹಾಳಾಗಿದ್ದು, ಜಾನುವಾರುಗಳು ಸಹ ಬದುಕದಂತೆ ಆಗಿದೆ. ಇದರ ವಿರುದ್ಧ ಕಾನೂನು ರೀತಿ ಕ್ರಮವಹಿಸಬೇಕು.

ಕೊಪ್ಪಳ:

ಕಾರ್ಖಾನೆಯ ಧೂಳಿನಿಂದಾಗಿ ಸುತ್ತಮುತ್ತ 30 ಗ್ರಾಮಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದು, ಕೂಡಲೇ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮವಹಿಸುವಂತೆ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಮನವಿ ಮಾಡಿದೆ. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಕೂಡಲೇ ಕಾರ್ಖಾನೆಗಳು ಇದರ ಹೊಣೆಗಾರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.ತುಂಗಭದ್ರಾ ನೀರು, ಫಲವತ್ತಾದ ಅಗ್ಗದ ದರದ ಭೂಮಿಯ ಮೇಲೆ ಕಣ್ಣಿಟ್ಟ ಕಾರ್ಪೊರೇಟ್ ಕಂಪನಿಗಳು ಹೊಸಪೇಟೆ, ಸಂಡೂರು, ಬಳ್ಳಾರಿಯಲ್ಲಿ ಸಂಪದ್ಭರಿತ ಮ್ಯಾಂಗನೀಸ್ ಗಣಿಗಾರಿಕೆ ಮಾಡಿ, ಯಥೇಚ್ಛವಾಗಿ ನೈಸರ್ಗಿಕ ಸಂಪನ್ಮೂಲ ಕೊಳ್ಳೆ ಹೊಡೆದು, ಪರಿಸರ ನಾಶ ಮಾಡಿದವು. ಸ್ಪಾಂಜ್ ಐರನ್, ಉಕ್ಕು ತಯಾರಿಸಲು ಶುದ್ಧ ಆಹ್ಲಾದಕರ ಹವಾಗುಣ ಇರುವ ಕೊಪ್ಪಳಕ್ಕೆ ಬಂದು ಕಾರ್ಖಾನೆ ಸ್ಥಾಪಿಸಿದವು. ಮೊಟ್ಟಮೊದಲು ಕಿರ್ಲೋಸ್ಕರ್ ರ್ಫೆರಸ್ ೧೯೯೧ರಲ್ಲಿ ಬೇವಿನಹಳ್ಳಿಯ್ಲಲ್ಲಿ ಕಾರ್ಖಾನೆ ಸ್ಥಾಪಿಸಿತು. ಈ ಕಾರ್ಖಾನೆಗಾಗಿ ಭೂಮಿ ಖರೀದಿಸುವಾಗ ನಡೆದ ದೊಡ್ಡ ದೌರ್ಜನ್ಯವನ್ನು ಎದುರಿಸಲಾಗದೆ, ರೈತರು ಉದ್ಯೋಗ ಸಿಗುವ ಆಸೆಯಿಂದ ಭೂಮಿ ಕೊಟ್ಟರು ಎಂದು ಮನವಿಯಲ್ಲಿ ತಿಳಿಸಿದೆ.

ನಂತರ ಬಂದ ಕಲ್ಯಾಣಿ ಗಿಣಿಗೇರಿಯಲ್ಲಿ ಸ್ಥಾಪನೆಯಾಗಿ ವಸಾಹತು ರೀತಿ ಬದಲಾಯಿತು. ಹಾಗೆ ಕೋಕಾ ಕೋಲ, ಹರೇಕೃಷ್ಣ, ಸ್ಪಾಂಜ್ ಐರನ್, ದ್ರುವದೇಶ ಸ್ಪಾಂಜ್ ಐರನ್, ಸ್ಕ್ಯಾನ್ ಇಸ್ಪತ್, ಬಾಬಾ ಅಖಿಲ ಶಿವಜೋತಿ, ಭದ್ರಶ್ರೀ ಸ್ಪಾಂಜ್ ಐರನ್, ಎಕ್ಸ್ ಇಂಡಿಯಾ, ಅಲ್ಟ್ರಾಟೆಕ್ ಸಿಮೆಂಟ್, ಕೆಪಿಆರ್ ರಸಾಯನ ಗೊಬ್ಬರ ಕಾರ್ಖಾನೆ, ಐಲ್‌ಸಿ ಸ್ಪಾಂಜ್ ಐರನ್, ಠಾಕೂರ ಸ್ಪಾಂಜ್ ಐರನ್, ಕೆಎಂಎಂಐ ಇಸ್ಪಾತ್, ಹೊಸಪೇಟೆ ಇಸ್ಪಾತ್, ಅರ್ಷದ್ ಇಸ್ಪಾತ್, ವನ್ಯಾ ಸ್ಟೀಲ್, ತ್ರಿವಿಸ್ತಾ ಸ್ಪಾಂಜ್ ಐರನ್, ಎಚ್‌ಆರ್‌ಜಿ ಅಲಾಯ್ಸ್, ಶರವಣ ಸ್ಪಾಂಜ್ ಐರನ್, ನವಭಾರತ ಫರ್ಟಿಲೈಸರ್ಸ್, ಕೋರಮಂಡಲ, ಮುಕುಂದಸುಮಿ, ದೊಡ್ಲ ಡೈರಿ ಹೀಗೆ ಹಲವು ಕಂಪನಿಗಳು ಇಲ್ಲಿನ ರೈತರ ಭೂಮಿಯಲ್ಲಿ ಸ್ಥಾಪಿಸಲ್ಪಟ್ಟವು. ಬಸಾಪೂರ, ಕುಟಗನಹಳ್ಳಿ ಗ್ರಾಮದ ೧೮೪ ಎಕರೆ ಕೃಷಿಭೂಮಿಯಲ್ಲಿ ೨೦೦೧ರಲ್ಲಿ ಬಲ್ಡೋಟಾ ಎಂಎಸ್‌ಪಿಎಲ್ ಕಂಪನಿಯ ವಿಮಾನ ನಿಲ್ದಾಣ ಸ್ಥಾಪಿಸಲಾಯಿತು. ನಗರದ ಸಮೀಪದಲ್ಲಿ ಎಂಪಿಎಸ್ ಪಿಎಲ್ ಸ್ಪಾಂಜ್ ಐರನ್ ಘಟಕ ಸ್ಥಾಪಿಸಲು ೨೦೦೬ರಲ್ಲಿ ಧರಂಸಿಂಗ್ ಸರ್ಕಾರ ಹಾಲವರ್ತಿ ಕೊಪ್ಪಳ ಬಸಾಪುರ, ಬೆಳವಿನಾಳ ಗ್ರಾಮದ ೧೦೩೪ ಎಕರೆ ಫಲವತ್ತಾದ ಕೃಷಿಭೂಮಿ ಮತ್ತು ಬಸಾಪುರ ಸ.ನಂ. ೧೪೩ರ ೪೪.೩೫ ಎಕರೆ ಸಾರ್ವಜನಿಕ ಕೆರೆಯನ್ನು ಮತ್ತು ೧೨.೨೧ ಎಕರೆ ಸರ್ಕಾರಿ ಜಮೀನು ಸೇರಿಸಿ ಕೆಐಎಡಿಬಿ ಮೂಲಕ ದೌರ್ಜನ್ಯದಿಂದ ಸ್ವಾಧೀನಪಡಿಸಿಕೊಳ್ಳಲಾಯಿತು. ಹೀಗೆ ಬಂದಿರುವ ಕಾರ್ಖಾನೆಗಳಿಂದ ಜನರ ಆರೋಗ್ಯ ಮತ್ತು ಕೃಷಿ ಭೂಮಿಯೂ ಹಾಳಾಗಿದ್ದು, ಜಾನುವಾರುಗಳು ಸಹ ಬದುಕದಂತೆ ಆಗಿದೆ. ಇದರ ವಿರುದ್ಧ ಕಾನೂನು ರೀತಿ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಮಿತಿಯ ಮುಖಾಂಡರಾದ ಅಲ್ಲಮ ಪ್ರಭು ಬೇಟದೂರು, ಕೆ.ಬಿ. ಗೋನಾಳ್, ಬಸವರಾಜ್ ಶೀಲವಂತರ, ಶರಣು ಗಡ್ಡಿ, ಮಂಗಳೇಶ ರಾಥೋಡ್, ಶಿವಪ್ಪ ಹಡಪದ ಉಪಸ್ಥಿತರಿದ್ದರು.