ಬೇಡ್ತಿ ಅಘನಾಶಿನಿ ಕೊಳ್ಳ ಸಮಿತಿಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ

ಕನ್ನಡಪ್ರಭ ವಾರ್ತೆ ಯಲ್ಲಾಪುರಬೇಡ್ತಿ ವರದಾ ಯೋಜನೆ ಸಲುವಾಗಿ ಎನ್.ಡಬ್ಲು ಡಿ.ಎ. ಮತ್ತು ರಾಜ್ಯ ಸಂಪನ್ಮೂಲ ಇಲಾಖೆಯವರು ಸ್ಥಳ ಸಮೀಕ್ಷೆ ನಡೆಸಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಅನುಮತಿ ನೀಡಬಾರದು ಎಂದು ಆಗ್ರಹಿಸಿ, ಬೇಡ್ತಿ ಅಘನಾಶಿನಿ ಕೊಳ್ಳ ಸಮಿತಿಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಬೇಡ್ತಿ ಮತ್ತು ಅಘನಾಶಿನಿ, ಶಾಲ್ಮಲಾ ನದೀ ಕಣಿವೆಗಳ ರಕ್ಷಣೆ ಜವಾಬ್ದಾರಿ ಅರಣ್ಯ ಇಲಾಖೆಯದ್ದಾಗಿದೆ. ಯಲ್ಲಾಪುರ ಮತ್ತು ಶಿರಸಿ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಜೀವ ವೈವಿಧ್ಯ ತಾಣಗಳಿವೆ. ಸೀತಾ, ಅಶೋಕಾ, ಮರ ಅರಿಶಿಣ ವೃಕ್ಷಗಳ ವನಗಳಿವೆ. ವಿನಾಶದ ಅಂಚಿನ ಔಷಧಿ ವೃಕ್ಷ ಸಂಕುಲಗಳಿವೆ. ಬೇಡ್ತಿ ಮತ್ತು ಅಘನಾಶಿನಿ ನದಿ ತೀರದ ಅಮೂಲ್ಯ ಸಸ್ಯವರ್ಗಗಳ ರಕ್ಷಣೆ ಬಹಳ ಮುಖ್ಯ ಎಂದು ಮನವಿ ಸಲ್ಲಿಸಿದ ಪ್ರಮುಖರು ಅರಣ್ಯಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.ಇದೀಗ ಬೃಹತ್ ಪಂಪ್ಡ್ ಸ್ಟೋರೇಜ್‌ ಯೋಜನೆಗೆ ಸರ್ಕಾರದ ಅರಣ್ಯ ಇಲಾಖೆ ಒಪ್ಪಿಗೆ ನೀಡಬಾರದು. ಇಲ್ಲಿ ಈಗಾಗಲೇ ೪ ಜಲಾಶಯಗಳು, ಗಣಿಗಾರಿಕೆ, ಇತರ ಹಲವು ಕಾಮಗಾರಿಗಳಿವೆ. ಕೇಂದ್ರ ವನ್ಯ ಜೀವಿ ಮಂಡಳಿಯ ತಜ್ಞರ ಸಮಿತಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅನುಮತಿ ಬೇಡ ಎಂದು ವರದಿ ನೀಡಿದೆ. ಈ ವರದಿಯನ್ನು ಪರಿಗಣಿಸಿ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಪ್ರಮುಖರಾದ ಅನಂತ ಹೆಗಡೆ ಅಶೀಸರ, ಶಾಂತಾರಾಮ ಸಿದ್ದಿ, ನರಸಿಂಹ ಸಾತೊಡ್ಡಿ, ಟಿ.ಆರ್. ಹೆಗಡೆ, ಬಾಲಚಂದ್ರ ಸಾಯಿಮನೆ, ರವಿ ಭಟ್ಟ ಬರಗದ್ದೆ, ಜಿ.ಎಸ್. ಭಟ್ಟ ಕಾರೆಮನೆ, ವೆಂಕಟ್ರಮಣ ಬೆಳ್ಳಿ, ರಾಮಕೃಷ್ಣ ಕವಡಿಕೆರೆ, ಕೆ.ಟಿ. ಹೆಗಡೆ, ಕೇಶವ ಭಟ್ಟ ಕವಡಿಕೆರೆ, ಗೋಪಾಲಕೃಷ್ಣ ಮಂಗಳಾರ್ತಿ ಭಾಗವಹಿಸಿದ್ದರು.