ವಿಕಸಿತ ಭಾರತ್ ಜಿರಾಮ್‌ಜಿ ಬಿಲ್ ಜಾರಿ ಮಾಡದಂತೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ಸಂಸದರ ಕಾರ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಿಕಸಿತ ಭಾರತ್ ಜಿರಾಮ್‌ಜಿ ಬಿಲ್ 2025ನ್ನು ಜಾರಿ ಮಾಡದಂತೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಸಂಸದರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಈ ಸಂಬಂಧ ಬಿಲ್ ಜಾರಿ ಮಾಡದಂತೆ ರಾಷ್ಟ್ರಪತಿ ಅವರಿಗೆ ಪತ್ರ ಬರೆಯಬೇಕೆಂದು ಆಗ್ರಹಿಸಲಾಯಿತು.ನಗರದ ಒನಕೆ ಓಬವ್ವ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ನಿಜಲಿಂಗಪ್ಪ ರಸ್ತೆ ಮೂಲಕ ಹಾದು ಸಂಸದರ ಕಚೇರಿಗೆ ಆಗಮಿಸಿ ಘೋಷಣೆ ಕೂಗಿದರು. ಮನರೇಗ ಉಳಿಸುವಂತೆ ಒತ್ತಾಯಿಸಿದರು.
ಉದ್ಯೋಗ ಖಾತ್ರಿ ಯೋಜನೆ ಗ್ರಾಮಿಣ ಭಾಗದ ಕೂಲಿ ಅಶ್ರಿತ ಕುಟುಂಬಗಳಿಗೆ ಜೀವನಾಡಿಯಾಗಿದ್ದು, 5 ವರ್ಷಗಳ ಸುಧೀರ್ಘಕಾಲ ಬದುಕು ಕಟ್ಟಿಕೊಳ್ಳಲು ಆಶ್ರಯವಾಗಿದೆ. ಇಂತಹ ಕಾನೂನು ಭಾರತ ದೇಶ ಬಿಟ್ಟರೇ ಬೇರೆ ಯಾವುದೇ ದೇಶದಲ್ಲಿ ಜಾರಿಯಲ್ಲಿಲ್ಲ, ದೇಶಾದ್ಯಂತ ಕೋಟ್ಯಂತರ ಕುಟುಂಬಗಳ ಕಾರ್ಮಿಕರು ದುಡಿದು-ಕೂಲಿ ಪಡೆದು ಜೀವನ ನಿರ್ವಹಣೆ ಮಾಡಿಕೊಂಡು ಮುಖ್ಯವಾಗಿ ಗ್ರಾಮಿಣ ಪ್ರದೇಶ ಬಿಟ್ಟು ವಲಸೆ ಹೋಗದಂತೆ ಬದುಕುತ್ತಿದ್ದಾರೆ. ಇದನ್ನು ಮಾರ್ಪಡಿಸಲು ಮುಂದಾಗಿರುವುದು ಅಕ್ಷಮ್ಯವೆಂದರು.ಮನರೇಗ ಕಾನೂನಿನಲ್ಲಿ ಲೋಪ-ದೋಷಗಳಿದ್ದರೆ ತಾಂತ್ರಿಕವಾಗಿ ಸರಿಪಡಿಸಲು ಆದೇಶ ಮಾಡಬಹುದಿತ್ತು. ಆದರೆ ಎಲ್ಲಾ ರೀತಿಯಿಂದ ಹೊಸದಾಗಿ ಜಾರಿಯಾಗಲಿರುವ ಕೇಂದ್ರ ಸರಕಾರ ಸಿದ್ಧಪಡಿಸಿರುವ ವಿಕಸಿತ ಭಾರತ್ ಜಿರಾಮ್‌ಜಿ ಬಿಲ್ 2025 ಸಂಪೂರ್ಣವಾಗಿ ಕಾರ್ಮಿಕರಿಗೆ 125 ದಿನಗಳ ಕೆಲಸದ ಖಾತರಿ ಇಲ್ಲದಂತೆ ಮಾಡುತ್ತದೆ. ಮನರೇಗಾ ಕಾನೂನಿನ ಮೂಲ ಆಶಯಕ್ಕೆ ಧಕ್ಕೆಯಾಗುತ್ತಿದೆ. ಗ್ರಾಮೀಣ ಭಾಗದ ಕಾರ್ಮಿಕರು ರೈತರು-ಗ್ರಾಮಸಭೆಗಳ ಮೂಲಕ ಗ್ರಾಮಗಳಿಗೆ ಬೇಕಾದ ಉತ್ತಮ ಕೆಲಸಗಳನ್ನು ಆಯ್ಕೆ ಮಾಡಿಕೊಂಡು ಕೆಲಸ ಮಾಡಿ ಆಸ್ತಿ ಸೃಜನ ಮಾಡಿಕೊಳ್ಳುತ್ತಿದ್ದರು. ಆದರೆ ಹೊಸದಾಗಿ ತಯಾರಿಸಲಾದ ಬಿಲ್‌ನಲ್ಲಿ ಇದಕ್ಕೆ ಅವಕಾಶವಿಲ್ಲದಿರುವುದು ಗ್ರಾಮಸಭೆಯ ಹಕ್ಕನ್ನು ಉಲ್ಲಂಘನೆ ಮಾಡಿರುವುದು ಕಂಡುಬರುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹೊಸ ಯೋಜನೆಗೆ ಕೇಂದ್ರದ ಪಾಲು ಶೇ.60, ರಾಜ್ಯ ಸರಕಾರಗಳ ಪಾಲು ಶೇ.40ರಷ್ಟು ಹಂಚಿಕೆ ಮಾಡಿದ್ದು, ಇಷ್ಟು ಮೊತ್ತದ ಹಣ ಹೊಂದಿಸಲು ಯಾವ ರಾಜ್ಯ ಸರಕಾರಗಳಿಗೂ ಸಾಧ್ಯವಿಲ್ಲದ ಕಾರಣ ರಾಜ್ಯಗಳ ತೆರಿಗೆಯ ಬಹುಪಾಲು ಕೇಂದ್ರ ಸರಕಾರಕ್ಕೆ ಹೋಗುತ್ತದೆ. ಇಂತಹ ಸ್ಥಿತಿಯಲ್ಲಿ ಹಣ ನೀಡಬೇಕಾದ ಕೇಂದ್ರ ಸರಕಾರ ರಾಜ್ಯಗಳಿಗೆ ಹೊರೆ ಹಾಕಿದರೆ ದುಡಿಯುವ ಕೈಗಳಿಗೆ ಕೆಲಸ ಮತ್ತು ಕೂಲಿ ಸಿಗಲು ಸಾಧ್ಯವೇ ಇಲ್ಲ, ನರೇಗಾ ಕಾರ್ಮಿಕರ ಒಪ್ಪಿಗೆ ಪಡೆಯದೇ ಮೂರೇ ದಿನದಲ್ಲಿ ಬಿಲ್ ಪಾಸ್ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು.ಬೇಡಿಕೆ ಆಧಾರವಾಗಿ ಜಾಬ್ ಕಾರ್ಡ್ ದಾರರು ವರ್ಷವಿಡಿ ಕೆಲಸ ಮಾಡಲು ಮನರೇಗಾ ಕಾನೂನಿನಲ್ಲಿ ಅವಕಾಶವಿತ್ತು. ಹೊಸ ಬಿಲ್‌ನಲ್ಲಿ ಪೂರೈಕೆ ಆಧಾರಿತ ಮಾಡಿರುವುದು ತಾರತಮ್ಯದ ನೀತಿ ಹಾಗೂ ಉದ್ಯೋಗ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರ ಖಾತರಿ ಇಲ್ಲದಂತಾಗಿದೆ. ಹಾಗಾಗಿ ಈ ಬಿಲ್ಲನ್ನು ನಿರಾಕರಿಸಲು ರದ್ದುಪಡಿಸಲು, ಹಿಂಪಡೆಯಲು ಸಹಿ ಹಾಕದಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತೇಜೇಶ್ವರಿ, ಸಂಧ್ಯ, ಲತ, ಗಂಗಮ್ಮ, ನೇತ್ರಮ್ಮ, ನೀಲಮ್ಮ, ಜಯಲಕ್ಷ್ಮೀ, ತಿಪ್ಪೇಸ್ವಾಮಿ, ರಾಮಚಂದ್ರಪ್ಪ, ಸುರೇಶ್, ಹನುಮಂತಪ್ಪ, ನರಸಿಂಹಪ್ಪ, ಕರಿಯಣ್ಣ, ಭಾಗ್ಯಮ್ಮ ಸೇರಿ ಅನೇಕರು ಇದ್ದರು.