ಮದ್ಯದ ಅಂಗಡಿಗೆ ಪರವಾನಗಿ ನೀಡದಂತೆ ಒತ್ತಾಯ

| Published : Jan 08 2025, 12:18 AM IST

ಸಾರಾಂಶ

ಬೆಳವಣಿಕಿ ಗ್ರಾಮದಲ್ಲಿ ಹೊಸದಾಗಿ ಸಾರಾಯಿ ಅಂಗಡಿಯ ಲೈಸೆನ್ಸ ನೀಡುವುದನ್ನು ಹಿಂಪಡೆಯಬೇಕು, ಅಲ್ಲಿ ಕಟ್ಟಿರುವ ಕಟ್ಟಡಕ್ಕೆ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದು

ರೋಣ: ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದ ತಾಲೂಕು ಸಮಿತಿ ಹಾಗೂ ರೋಣ ಭೀಮ ಆರ್ಮಿ ಏಕ್ತಾ ಮಿಷನ್ ರೋಣ ಮತ್ತು ಬೆಳವಣಿಕಿ ಗ್ರಾಮಸ್ಥರಿಂದ ಮಂಗಳವಾರ ರೋಣ ಪಟ್ಟಣದ ಅಬಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಜರುಗಿತು.

ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾದ ತಾಲೂಕಾಧ್ಯಕ್ಷ ಹನುಮಂತ ಚಲವಾದಿ ಮಾತನಾಡಿ, ಬೆಳವಣಿಕಿ ಗ್ರಾಮದಲ್ಲಿ ಹೊಸದಾಗಿ ಮದ್ಯದ ಅಂಗಡಿಗೆ ಪರವಾನಗಿ ನೀಡಬಾರದು. ಒಂದು ವೇಳೆ ಪರವಾನಗಿ ನೀಡಿದ್ದರೆ ರದ್ದುಪಡಿಸಬೇಕು. ಈಗಾಗಲೇ ಮದ್ಯದ ಅಂಗಡಿ ತೆರೆಯಲು ಕಟ್ಟಡ ನಿರ್ಮಾಣ ಮಾಡಿದ್ದು ಖಂಡನೀಯ. ಕಟ್ಟಡದ ಸುತ್ತ ಬಡ ಜನರಿಗೆ ಗ್ರಾಪಂನಿಂದ ನಿವೇಶನ ಹಂಚಿಕೆ ಮಾಡಿದ್ದು ಇದರ ಮಧ್ಯೆ ಹೊಸದಾಗಿ ಸಾರಾಯಿ ಅಂಗಡಿ ತೆಗೆದಿರುವುದು ಸೂಕ್ತವಲ್ಲ.ಕೂಡಲೇ ಸಾರಾಯಿ ಅಂಗಡಿಯ ಪರವಾನಗಿ ರದ್ದು ಮಾಡಿ ಬೇರೆ ಕಡೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.

ಭೀಮ್ ಆರ್ಮಿ ಏಕ್ತಾ ಮಿಷನ್ ತಾಲೂಕಾಧ್ಯಕ್ಷ ಪುಂಡಲೀಕ ಮಾದರ ಮಾತನಾಡಿ, ಬೆಳವಣಿಕಿ ಗ್ರಾಮದಲ್ಲಿ ಹೊಸದಾಗಿ ಸಾರಾಯಿ ಅಂಗಡಿಯ ಲೈಸೆನ್ಸ ನೀಡುವುದನ್ನು ಹಿಂಪಡೆಯಬೇಕು, ಅಲ್ಲಿ ಕಟ್ಟಿರುವ ಕಟ್ಟಡಕ್ಕೆ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದು ಆ ಕಟ್ಟಡದ ಮಧ್ಯೆ ಬಡ ಜನರು ವಾಸ ಮಾಡುತ್ತಾರೆ ಮತ್ತು ದೇವಸ್ಥಾನಕ್ಕೆ ಮಹಿಳೆಯರು ಕೂಡ ಬರುವುದರಿಂದ ಮುಂದೆ ತೊಂದರೆಗಳಾಗಬಹುದು ಎಂದರು.

ಅಬಕಾರಿ ಜಿಲ್ಲಾ ಉಪ ಅಧಿಕ್ಷಕ ಭೀಮಣ್ಣ ರಾಥೋಡ್ ಮನವಿ ಸ್ವಿಕರಿಸಿ,ಬೆಳವಣಕಿ ಗ್ರಾಮದಲ್ಲಿ ಮದ್ಯ ಮಾರಾಟ ಅಂಗಡಿ ತೆರೆಯಲು ಸ್ಥಳ ಪರಿಶೀಲಿಸಿದ್ದು, ಈ ಕುರಿತು ಕೇವಲ ಚರ್ಚೆ ನಡೆದಿದೆ ಹೊರತು ಈವರೆಗೂ ಯಾವುದೇ ರೀತಿಯಲ್ಲಿ ಪರವಾನಗಿ ನೀಡಿಲ್ಲ. ಮದ್ಯ ಮಾರಾಟ ಅಂಗಡಿ ತೆರೆಯಲು ಗ್ರಾಮಸ್ಥರ ವಿರೋಧ ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡ ಬಸವರಾಜ ಕಾಳೆ, ಚಂದ್ರು ಅಬ್ಬಿಗೇರಿ, ಮುತ್ತು ನಂದಿ, ಮಹೇಶ ಮಾದರ, ರಮೇಶ ಮಾದರ, ಸಿದ್ದು ಅಮರಾವತಿ, ಸಾಗರ ಕಾಳೆ, ಭೀಮಪ್ಪ ದೊಡ್ಡಮನಿ, ನಾಗರಾಜ ದೊಡ್ಡಮನಿ, ಗೋಪಾಲ ತಾಳಿ, ವಿಜಯ ಚಲವಾದಿ, ಬಸವರಾಜ ಹಲಗಿ, ಮಂಜುನಾಥ ಚಲವಾದಿ, ಪ್ರಮೋದ ಚಲವಾದಿ, ಬಸವರಾಜ ಪೂಜಾರ, ಫಕೀರಪ್ಪ ಮಾದರ, ಹನುಮಂತ ಮುದೇನಗುಡಿ, ಬಸವರಾಜ ಕುರಿ, ವಸಂತ ಚಲವಾದಿ, ಇಮಾಮ್ ಹೊಸಳ್ಳಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.