ಸಂಡೂರು: ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಬಾರದೆಂದು ಒತ್ತಾಯಿಸಿರುವ ರೈತ ಸಂಘದ ತೋರಣಗಲ್ಲು ಘಟಕದ ಮುಖಂಡರು ಸೋಮವಾರ ತೋರಣಗಲ್ಲು ಉಪ ವಿಭಾಗದ ವಿದ್ಯುತ್ ಕೇಂದ್ರದ ಸಹಾಯಕ ಎಲ್.ಬಿ. ರಾಥೋಡ್ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಪಂಪನಗೌಡ, ಸರ್ಕಾರದ ನಿಯಂತ್ರಣದಲ್ಲಿರುವ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಇಲ್ಲಿಯತನಕ ಬೆಸ್ಕಾಂ, ಜೆಸ್ಕಾಂ ಮುಂತಾದ ಕಂಪನಿಗಳು ನಿರ್ವಹಿಸಿವೆ. ಸಾರ್ವಜನಿಕ ಹೂಡಿಕೆಯೊಂದಿಗೆ ನಿರ್ಮಾಣವಾಗಿರುವ ವಿದ್ಯುತ್ ವಿತರಣಾ ಜವಾಬ್ದಾರಿಯನ್ನು ಈಗ ಖಾಸಗಿ ಕಂಪನಿಯಾದ ಟಾಟಾ ಪವರ್ ಕಂಪನಿಗೆ ರಾಜ್ಯದ ೧೯ ಜಿಲ್ಲೆಗಳಲ್ಲಿ ನೀಡಬೇಕೆಂದು ಕಂಪನಿಯು ರಾಜ್ಯದ ಕೆಇಆರ್‌ಸಿ ಮುಂದೆ ಅರ್ಜಿಯನ್ನು ಸಲ್ಲಿಸಿದೆ. ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗೆ ನೀಡಬಾರದೆಂದು ಕೆಇಆರ್‌ಸಿಗೆ ತಕರಾರು ಅರ್ಜಿ ಸಲ್ಲಿಸುವ ಭಾಗವಾಗಿ ಸಂಘದಿಂದ ಮನವಿ ಸಲ್ಲಿಸುತ್ತಿದ್ದೇವೆ. ಇಲ್ಲಿವರೆಗೆ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಜೆಸ್ಕಾಂ, ಬೆಸ್ಕಾಂ ಮುಂತಾದ ನಿಗಮಗಳು ರೈತರ ಪಂಪ್‌ಸೆಟ್‌ಗಳಿಗೆ, ಜನಸಾಮಾನ್ಯರ ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಎಲ್ಲ ವಿಭಾಗದ ಸಣ್ಣ ಮತ್ತು ಮಧ್ಯಮ ವರ್ಗದ ವಾಣಿಜ್ಯ ಮುಂತಾದ ವಿಭಾಗಗಳಿಗೆ ಸರ್ಕಾರ ನಿಗದಿಗೊಳಿಸಿದ ರೀತಿಯಲ್ಲಿ, ರಿಯಾಯಿತಿ, ಸಬ್ಸಿಡಿಗಳ ಮುಖಾಂತರ ವಿದ್ಯುತ್ ಸರಬರಾಜು ಮಾಡುತ್ತಿದ್ದವು. ಇದರಿಂದ ಸಾಮಾನ್ಯ ಜನರಿಗೆ ತುಂಬ ಅನುಕೂಲವಾಗಿತ್ತು. ಉತ್ತಮ ಗುಣಮಟ್ಟದ ಮತ್ತು ಭದ್ರತೆಯ ಕ್ಷೇತ್ರವಾಗಿರುವ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಅವರಿಗೆ ನೀಡಿದರೆ, ಸಂಕಷ್ಟದಲ್ಲಿರುವ ರೈತರಿಗೆ, ಬಡವರಿಗೆ ವಿದ್ಯುತ್ ದುಬಾರಿಯಾಗಲಿದೆ ಹಾಗೂ ಆರ್ಥಿಕ ಹೊರೆ ಹೆಚ್ಚಾಗಲಿದೆ. ಟಾಟಾ ಪವರ್ ಕಂಪನಿಯ ಅರ್ಜಿಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಎನ್. ಶಂಕಣ್ಣ, ಎ. ಸ್ವಾಮಿ, ವಿ. ದೇವಣ್ಣ, ಸಿದ್ದಪ್ಪ, ವೀರೇಶ್, ಫಕ್ಕೀರಪ್ಪ ಇದ್ದರು.