ಸಾರಾಂಶ
ಹಳ್ಳಿಗಳ ರಸ್ತೆಯಲ್ಲಿ ಒಕ್ಕಣೆ ಆರಂಭ । ರಸ್ತೆಯಲ್ಲಿ ಹುರುಳಿ ಸೊಪ್ಪಿಂದ ಸವಾರರಿಗೆ ತೊಂದರೆ । ಕ್ರಮ ವಹಿಸಲು ಜಿಲ್ಲಾಡಳಿತಕ್ಕೆ ವಾಹನಗಳ ಸವಾರರ ಆಗ್ರಹ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನಲ್ಲೀಗ ಹುರುಳಿ ಒಕ್ಕಣೆ ಮಾಡುವ ಕಾಲ; ಒಕ್ಕಣೆ ಮಾಡಲು ರೈತರು ರಸ್ತೆಗಳಲ್ಲಿ ಮುಂದಾಗಿದ್ದು ತಾಲೂಕಿನ ಬಹುತೇಕ ರಸ್ತೆಗಳು ಹುರುಳಿ ಒಕ್ಕಣೆ ಕಣಗಳಾಗಿವೆ. ಅನಾಹುತಕ್ಕೂ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಒಕ್ಕಣೆ ರಸ್ತೆಗಳಲ್ಲಿ ಬ್ರೇಕ್ ಹಾಕಬೇಕಿದೆ.
ಕಳೆದ ಎರಡು ವರ್ಷಗಳ ಹಿಂದೆ ತಾಲೂಕಿನ ಭೀಮನಬೀಡು ಗ್ರಾಮದ ರಸ್ತೆಯಲ್ಲಿ ಓಮ್ನಿ ಕಾರೊಂದಕ್ಕೆ ಹುರುಳಿ ಸೊಪ್ಪು ಸುತ್ತಿಕೊಂಡು ಬೆಂಕಿ ತಗುಲಿ ಕಾರು ಬೆಂದು ಹೋಗಿತ್ತು. ಇದೀಗ ಮೈಸೂರು ರಸ್ತೆಯ ಬಳಿಯ ಮಾದಾಪಟ್ಟಣ ರಸ್ತೆ, ತಗ್ಗಲೂರು ರಸ್ತೆ, ಅರೇಪುರ ರಸ್ತೆ ಸೇರಿದಂತೆ ತಾಲೂಕಿನ ಬಹುತೇಕ ರಸ್ತೆಯಲ್ಲಿ ಹುರುಳಿ ಸೊಪ್ಪು ಸುರಿದು ಒಕ್ಕಣೆ ಮಾಡುವ ಮುನ್ನ ಮಂಡಿಯುದ್ದ ಹುರುಳಿ ಸೊಪ್ಪು ಹಾಕುವ ಕಾರಣ ವಾಹನಗಳ ಸವಾರರಿಗೆ ಸಂಚರಿಸಲು ತೊಂದರೆಯಾಗುತ್ತಿದೆ.ರಸ್ತೆಗಳಲ್ಲಿ ಹುರುಳಿ ಒಕ್ಕಣೆಯ ಋತುಮಾನ ಆರಂಭವಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಹೆಚ್ಚು ಒಕ್ಕಣೆ ಮಾಡುವುದಕ್ಕೂ ಮುನ್ನವೇ ಜಿಲ್ಲಾಡಳಿತ ಎಚ್ಚೆತ್ತು ಒಕ್ಕಣೆ ತಡೆಯುವ ಕೆಲಸ ಮಾಡಲಿ ಎಂದು ಸವಾರರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಮೈಸೂರು, ಊಟಿ ಹೆದ್ದಾರಿಯ ಬಿಟ್ಟು ಉಳಿದ ತಾಲೂಕಿನ ಬಹುತೇಕ ರಸ್ತೆಗಳಲ್ಲಿ ಹುರುಳಿ ಒಕ್ಕಣೆಗೆ ಸವಾರರು ಹೈರಾಣರಾಗಿದ್ದಾರೆ. ಆದರೂ ಜನರ ಹಿತದೃಷ್ಟಿಯಿಂದಲಾದರೂ ಪೊಲೀಸರು ಕನಿಷ್ಠ ಒಕ್ಕಣೆ ತಡೆಯಲು ಸಾಧ್ಯವಾಗುತ್ತಿಲ್ಲ.
ಜನರ ಹಿಡಿಶಾಪ?:ತಾಲೂಕಿನ ರಸ್ತೆಗಳು ಈಗ ಹುರುಳಿ ಒಕ್ಕಣೆ ಕಣಗಳಾಗಿದ್ದು ಕಾರು, ಬೈಕ್ ಸವಾರರ ಪಾಡು ಹೇಳತೀರದಾಗಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಿಂದ ಬರುವ ವಾಹನಗಳ ಮಾಲೀಕರು ತಾಲೂಕು ಆಡಳಿತಕ್ಕೆ ಹಿಡಿ ಶಾಪ ಹಾಕಿ ಹೋಗುತ್ತಿದ್ದಾರೆ.
ಅವಘಡ ಆಗ್ಬೇಕಾ?:ರಸ್ತೆಯಲ್ಲಿ ಹುರುಳಿ ಒಕ್ಕಣೆ ಸಮಯದಲ್ಲಿ ಕಾರು, ಆಟೋ, ಬೈಕ್ ಸವಾರರು ಚಕ್ರಗಳಿಗೆ ಸಿಕ್ಕಿಕೊಂಡ ಹುರುಳಿ ಸೊಪ್ಪು ಹೊರ ತೆಗೆಯಲು ಪರದಾಡುವಾಗ ಜಿಲ್ಲಾಡಳಿತಕ್ಕೆ ಬಾಯಿಗೆ ಬಂದಂತೆ ಬೈದು ಸುಮ್ಮನಾಗಿ ಹೋಗುತ್ತಿದ್ದಾರೆ. ವಾಹನಗಳ ಚಕ್ರಕ್ಕೆ ಸುತ್ತಿಕೊಂಡ ಹುರುಳಿ ಸೊಪ್ಪು ಒಣಗಿ ಬೆಂಕಿ ಹತ್ತಿಕೊಂಡು ವಾಹನಗಳು ಸುಟ್ಟರೆ ಜಿಲ್ಲಾಡಳಿತ ಹೊಣೆ ಹೊರುತ್ತದೆಯೇ ಎಂದು ಕಾರು ಮಾಲೀಕ ಅರುಣ್ ಪ್ರಶ್ನಿಸಿದ್ದಾರೆ.
ಕಣ್ಣು ಕಾಣುತ್ತಿಲ್ಲವೇ?:ರಸ್ತೆಗಳು ಒಕ್ಕಣೆಯ ಕಣಗಳಾಗಿರುವ ಬಗ್ಗೆ ತಾಲೂಕು ಅಡಳಿತ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೇ? ಸವಾರರ ಕಷ್ಟ ಅರ್ಥವಾಗುತ್ತಿಲ್ಲವೇ? ಏನಾದರೂ ಬೆಂಕಿ ಅವಘಡ ಸಂಭವಿಸುವ ತನಕ ಈ ಕಷ್ಟ ಅನುಭವಿಸಬೇಕಾ ಎಂದು ಸವಾರರು ಅಳಲು ತೋಡಿಕೊಂಡಿದ್ದಾರೆ.
ಹಿಂದೇಟು ಏಕೆ?ಒಕ್ಕಣೆ ಕಣಗಳಾಗಿರುವ ತಾಲೂಕಿನ ಬಹುತೇಕ ರಸ್ತೆಯಲ್ಲಿ ಹುರುಳಿ ಒಕ್ಕಣೆ ತಪ್ಪಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಕಾರಣವೂ ತಿಳಿಯುತ್ತಿಲ್ಲ, ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತು ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ತಪ್ಪಿಸಲಿ ಎಂದು ಬೈಕ್ ಸವಾರ ಕುಮಾರ್ ಆಗ್ರಹಿಸಿದ್ದಾರೆ.
ತಾಲೂಕಿನ ರಸ್ತೆಗಳಲ್ಲಿ ಹುರುಳಿ ಒಕ್ಕಣೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಹಾಗೂ ಸವಾರರಿಂದಲೂ ಮೌಖಿಕವಾಗಿ ನನಗೂ ಹೇಳುತ್ತಿದ್ದಾರೆ. ರಸ್ತೆ ತುಂಬೆಲ್ಲ ಹುರುಳಿ, ತೊಗರಿ ಕಡ್ಡಿ ಹಾಕುತ್ತಿದ್ದಾರೆ ಎಂಬ ದೂರಿದೆ. ಈ ಸಂಬಂದ ಪೊಲೀಸರೊಂದಿಗೆ ಮಾತನಾಡಿ ರಸ್ತೆಯಲ್ಲಿ ಒಕ್ಕಣೆ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ.ಟಿ.ರಮೇಶ್ ಬಾಬು, ತಹಸೀಲ್ದಾರ್