ಕ್ಯಾರಿಓವರ್ ಪದ್ಧತಿ ರದ್ದುಗೊಳಿಸಲು ವಿವಿಧ ಸಂಘಟನೆಗಳ ಆಗ್ರಹ

| Published : Oct 14 2024, 01:29 AM IST

ಸಾರಾಂಶ

ತಾಂತ್ರಿಕ ಶಿಕ್ಷಣದಲ್ಲಿ ಈಗಿರುವ ಕ್ಯಾರಿ ಓವರ್ ಪದ್ಧತಿಯಿಂದ ಕನ್ನಡ ಮಾಧ್ಯಮ, ಗ್ರಾಮೀಣ ಪ್ರದೇಶ, ರೈತರು ಮತ್ತು ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಮೊದಲನೇ ಮತ್ತು ಎರಡನೇ ವರ್ಷ ಕಲಿಕೆ ಕಷ್ಟವಾಗುತ್ತಿರುವುದರಿಂದ ಓದಿನಿಂದಲೇ ವಿಮುಖವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಪ್ರಸ್ತುತ ಇರುವ ಕ್ಯಾರಿ ಓವರ್ ಪದ್ಧತಿಯನ್ನು ರದ್ದುಗೊಳಿಸಿ ೨೦೨೨ರ ಹಿಂದೆ ಇದ್ದಂತ ಕ್ಯಾರಿ ಫಾರ್ವರ್ಡ್ ಪದ್ಧತಿಯನ್ನು ಮರು ಅನುಷ್ಠಾನಗೊಳಿಸುವಂತೆ ವಿವಿಧ ಸಂಘಟನೆಗಳು ಆಗ್ರಹಿಸಿದವು.

ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳು ಹಾಗೂ ವಿವಿಧ ಪಕ್ಷದ ಮುಖಂಡರ ಸಮ್ಮುಖದಲ್ಲಿ ಸಭೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಉನ್ನತ ಶಿಕ್ಷಣ ಸಚಿವರನ್ನು ನಿಯೋಗದೊಂದಿಗೆ ಭೇಟಿ ಮಾಡಲು ನಿರ್ಧರಿಸಲಾಯಿತು.

ತಾಂತ್ರಿಕ ಶಿಕ್ಷಣದಲ್ಲಿ ಈಗಿರುವ ಕ್ಯಾರಿ ಓವರ್ ಪದ್ಧತಿಯಿಂದ ಕನ್ನಡ ಮಾಧ್ಯಮ, ಗ್ರಾಮೀಣ ಪ್ರದೇಶ, ರೈತರು ಮತ್ತು ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಮೊದಲನೇ ಮತ್ತು ಎರಡನೇ ವರ್ಷ ಕಲಿಕೆ ಕಷ್ಟವಾಗುತ್ತಿರುವುದರಿಂದ ಓದಿನಿಂದಲೇ ವಿಮುಖವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಯಿತು.

ಹೊಸ ಪರೀಕ್ಷಾ ನೀತಿ, ಸರ್ಕಾರಿ ಮತ್ತು ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ನಡುವೆ ಕ್ಯಾರಿ ಓವರ್ ಮತ್ತು ಕ್ಯಾರಿ ಫಾರ್ವರ್ಡ್ ನಡುವಿನ ದ್ವಂದ್ವ ಹಾಗೂ ಮನಸೋ ಇಚ್ಛೆ ಶುಲ್ಕ ಪಡೆಯುವ ವ್ಯವಸ್ಥೆ ಇರುವುದರಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲವಾಗುತ್ತಿದೆ. ಈ ಎಲ್ಲ ವಿಷಯಗಳನ್ನು ಸಚಿವರ ಭೇಟಿಯಲ್ಲಿ ಚರ್ಚಿಸಲು ನಿರ್ಧರಿಸಲಾಯಿತು.

ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ವಿಷಯ ಮಂಡಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಶಿಕ್ಷಣ ತಜ್ಞ ಪ್ರೊ.ಬಿ.ಶಿವಲಿಂಗಯ್ಯ, ಗುರುಮೂರ್ತಿ ಹಾರೋಹಳ್ಳಿ, ಜೆಡಿಎಸ್ ಮುಖಂಡ ಎಚ್.ಆರ್.ರವೀಂದ್ರ, ರೈತ ಸಂಘದ ಮುಖಂಡರಾದ ಮಂಜೇಶ್‌ಗೌಡ ದೊಡ್ಡಪಾಳ್ಳ, ಇಂಡುವಾಳು ಚಂದ್ರಶೇಖರ್, ಡಿ.ದೇವರಾಜು ಅರಸು ವೇದಿಕೆಯ ಅಧ್ಯಕ್ಷ ಎಲ್.ಸಂದೇಶ್, ಮುಖಂಡರಾದ ಎಂ.ಬಿ.ನಾಗಣ್ಣಗೌಡ, ಸಿ.ಕುಮಾರಿ, ನಾರಾಯಣ್, ಮಂಜುನಾಥ್, ಜೆ.ರಾಮಯ್ಯ, ಪದ್ಮಾ ಮೋಹನ್, ಎಸ್.ಬಿ.ನಾರಾಯಣಸ್ವಾಮಿ, ಶ್ರೀಧರ್, ಸಿ.ಎಂ.ದ್ಯಾವಪ್ಪ, ರಾಜೂಗೌಡ ಭಾಗವಹಿಸಿದ್ದರು.