ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ನಿರ್ದೆಶನದ ಮೇರೆಗೆ ಸರ್ಕಾರಕ್ಕೆ ಸಲ್ಲಿಸಿರುವ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರದಿಂದ ತಾಲೂಕು ಕಚೇರಿ ಎದುರು ಶಾಂತಿಯುತವಾಗಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿರು ವುದಾಗಿ ತಾಲೂಕು ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷ ಎಸ್.ಎಸ್.ಸುಧಾಕರ್ ಹೇಳಿದರು.ಗಣಕೀಕರಣ ಸೇರಿದಂತೆ ಇಲಾಖೆಯ ಕಾರ್ಯನಿರ್ವಹಣೆಗೆ ಪೂರಕವಾದ ಸವಲತ್ತುಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಈವರೆಗೆ ಸರ್ಕಾರ ದಿಂದ ಸ್ಪಂದನೆ ದೊರೆತಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಛೇರಿ, ಮೊಬೈಲ್ ಫೋನ್, ಗೂಗಲ್ ಕ್ರೋಮ್‌ಬುಕ್ ಹಾಗೂ ಲ್ಯಾಪ್‌ಟಾಪ್, ಪ್ರಿಂಟರ್ ಸ್ಕ್ಯಾನರ್ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ನಮ್ಮ ಬೇಡಿಕೆ ಈಡೇರುವವರೆಗೆ ಧರಣಿ ನಡೆಸುವುದಾಗಿ ತಿಳಿಸಿದರು.
ಹೆಚ್ಚುವರಿ ಕೆಲಸ ಮತ್ತು ಮೇಲಾಧಿಕಾರಿಗಳ ಒತ್ತಡದಿಂದ ಮಾನಸಿಕವಾಗಿ ಕುಗ್ಗಿದ್ದೇವೆ. ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಬೇಡಿಕೆಯಂತೆ ಸೇವಾ ವಿಷಯಗಳಿಗೆ ಸಂಭಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸಬೇಕು. ಪ್ರೋಟೋಕಾಲ್ ಕೆಲಸದಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೈಬಿಡುವಂತೆ ಸೂಕ್ತ ಆದೇಶ ನೀಡುವುದು, ದಫ್ತರ್ ಹಾಗೂ ಜಮಾಬಂದಿಯನ್ನು ರದ್ದು ಪಡಿಸುವುದು, ಅನ್ಯ ಇಲಾಖೆಯ ಕೆಲಸ ನಿರ್ವಹಿಸದಂತೆ ಸೂಕ್ತ ಆದೇಶ ನೀಡುವುದು,ಹಾಲಿ ಇರುವ ರ್‍ಯಾಂಕಿಂಗ್ ವ್ಯವಸ್ಥೆಯನ್ನು ರದ್ದು ಪಡಿಸುವುದು, ಮ್ಯುಟೇಶನ್ ಅವಧಿ ದಿನವನ್ನು ವಿಸ್ತರಣೆ ಮಾಡುವುದು ಹಾಗೂ ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು ಎಂದೂ ಆಗ್ರಹಿಸಿದರು. ಧರಣಿಯಲ್ಲಿ ಕಂದಾಯ ಇಲಾಖೆ ನೌಕರರ ಸಂಘದ ಅರ್ಧಯಕ್ಷ ಸುಧೀರ್ ಬಿ.ವಿ. ಇದ್ದರು.ರಾಜ್ಯಮಟ್ಟದ ಹೋರಾಟದ ಎಚ್ಚರಿಕೆಹೊಸನಗರ: ಮೂಲಭೂತ ಸೌಕರ್ಯ, ಸೇವಾ ಸೌಲಭ್ಯ ಒದಗಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗುರುವಾರ ಇಲ್ಲಿನ ತಾಲೂಕು ಕಚೇರಿ ಎದುರು ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾದರು.
ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಕಾರ್ಯಕಾರಣಿ ಸಭೆಯ ನಿರ್ಣಯದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಲೇಖನಿ ಕೆಳಗಿಟ್ಟು, ಮೊಬೈಲ್ ಆಪ್ ಮತ್ತು ವೆಬ್ ಕಾರ್ಯ ಸ್ಥಗಿತಗೊಳಿಸಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಒತ್ತಡ ಹೇರಲು ನಿರ್ಧರಿಸಲಾಗಿತ್ತು.ಗ್ರಾಮ ಆಡಳಿತ ಅಧಿಕಾರಿ ಸಂಘದ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ,ಸೇವಾ ವಿಷಯಗಳಿಗೆ ಸೂಕ್ತ ಸೌಲಭ್ಯಗಳಾದ ಸುಸಜ್ಜಿತ ಕಚೇರಿ, ಉತ್ತಮ ಪರಿಕರಗಳು, ಸಿಯುಜಿ ಸಿಮ್, ಡಾಟಾ ಹೊಂದಿರುವ ಮೊಬೈಲ್ ಪೋನ್, ಗೂಗಲ್ ಕ್ರೋಮ್ ಬುಕ್, ಟಾಪ್, ಪ್ರಿಂಟರ್, ಸ್ಕ್ಯಾನರ್ ನೀಡಬೇಕೆಂದು ಆಗ್ರಹಿಸಿದರು.ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಮೊಬೈಲ್ ತಂತ್ರಾಂಶಗಳ ಕಾರಣ ಆಗಿರುವ ಎಲ್ಲಾ ಸಿಬ್ಬಂದಿಗಳ ಅನುಮಾತನ್ನು ತಕ್ಷಣವೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.ರೇಣುಕಯ್ಯ ಮಾತನಾಡಿ, ಮೊಬೈಲ್ ಆಪ್ ಕೈಬಿಟ್ಟು ಸೂಕ್ತ ಕಾಲಾವಕಾಶ ನೀಡಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುವಂತೆ ಒತ್ತಾಯಿಸಿದರು.
ಇಂದಿನ ಸಾಂಕೇತಿಕ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ರಾಜ್ಯಮಟ್ಟದ ಹೋರಾಟ ನಡೆಸುವ ಎಚ್ಚರಿಕೆಯನ್ನು ಸಂಘ ನೀಡಿತು. ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಜಿ.ಎಸ್. ಯೋಗೀಶ್, ಕಾರ್ಯದರ್ಶಿ ಸಿದ್ದಪ್ಪ ಚೂರೇರ, ಖಜಾಂಚಿ ಸುನಿಲ್ ದೇವಾಡಿಗ, ದೀಪು, ಆರ್.ಪಿ.ಸುರೇಶ್, ಜಾಹೀರ್ ಹುಸೇನ್, ಇಂದಿರಾ, ಕೌಶಿಕ್, ಬಾಳೆಕೊಪ್ಪ ನಾಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸಾಗರದಲ್ಲೂ ಕಪ್ಪುಪಟ್ಟಿ ಧರಿಸಿ ಧರಣಿಸಾಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಸ್ಥಳೀಯ ಶಾಖೆ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಪರಮೇಶ್ವರಪ್ಪ ಮಾತನಾಡಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮಾಡಳಿತ ಅಧಿಕಾರಿಗಳು, ನೌಕರರ ಸಂಘದ ಹೋರಾಟ ನ್ಯಾಯಸಮ್ಮತವಾಗಿದ್ದು, ಸರ್ಕಾರ ಇವರ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ಆನಂದ್ ಮಾತನಾಡಿ, ಕಂದಾಯ ಸಚಿವರು ಸ್ಥಳೀಯ ಸಮಸ್ಯೆ ಅರಿತುಕೊಂಡು ಕೆಲವು ವಿನಾಯಿತಿಗಳನ್ನು ನೀಡಬೇಕು. ಗ್ರಾಮ ಆಡಳಿತಾಧಿಕಾರಿ ಗಳ ಮೇಲೆ ಟಾರ್ಗೆಟ್ ಹೇರುತ್ತಿದ್ದು, ರಜೆ, ಹಬ್ಬದ ದಿನಗಳಲ್ಲಿ ಸಹ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಫರ್ನಾಂಡಿಸ್, ಉಮೇಶ್, ಶ್ವೇತಾ ಇನ್ನಿತರರು ಮಾತನಾಡಿದರು. ನಂದೀಶ್, ಗಜೇಂದ್ರ, ಗುರುರಾಜ್, ರಘು, ಬೀರಪ್ಪ, ವಿನಾಯಕ್ ಇನ್ನಿತರರು ಹಾಜರಿದ್ದರು.