ಪಿಎಸೈ ಪರಶುರಾಮ್‌ ಸಾವು ಪ್ರಕರಣ ಸಿಬಿಐಗೆ ನೀಡಲು ಆಗ್ರಹ

| Published : Aug 08 2024, 01:36 AM IST

ಸಾರಾಂಶ

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸರಕಾರಿ ಹಾಗೂ ಸರಕಾರೇತರ ನೌಕರರ ಸಂಘದ ವತಿಯಿಂದ ಪಿಎಸ್ಐ ಪರಶುರಾಮ ಸಾವಿನ ಕುರಿತು ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಸಿಐಡಿ ತನಿಖೆಗೆ ವಹಿಸಿರುವ ನಗರ ಪೋಲಿಸ್ ಠಾಣೆಯ ಪಿಎಸ್‌ಐ ಪರಶುರಾಮ ಅವರ ಸಾವಿನ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸರಕಾರಿ, ಅರೆ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ನೇತೃತ್ವದಲ್ಲಿ ನೌಕರರು ಹಾಗೂ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಬುಧವಾರ ನಗರದ ನೇತಾಜಿ ಸುಭಾಷ್‌ ಚಂದ್ರ ಬೋಸ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಪಿಎಸ್‌ಐ ಸಾವಿಗೆ ಯಾದಗಿರಿ ಶಾಸಕ ಚೆನ್ನರೆಡ್ಡಿ ಪಾಟೀಲ್‌ ಹಾಗೂ ಅವರ ಪುತ್ರ ಸನ್ನಿಗೌಡ ಎಂದು ಆರೋಪಿಸಿ, ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಪಿಎಸ್‌ಐ ಪರಶುರಾಮ ಅವರು ಹಠಾತ್ತಾಗಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸಾವಿನ ನಂತರ ಮೃತ ಪಿಎಸ್‌ಐ ಅವರ ಪತ್ನಿ ಶ್ವೇತಾ ಅವರು, ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅವರ ಪುತ್ರ ಸನ್ನಿಗೌಡರ ಕಿರುಕುಳದಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ.

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲಿಸ್ ಅಧಿಕಾರಿಗೆ ಅದೇ ಠಾಣೆಯಲ್ಲಿ ಮುಂದುವರೆಯಲು ಲಕ್ಷಾಂತರ ರು. ಹಣ ಕೊಡಬೇಕು. ಇಲ್ಲದಿದ್ದರೆ ಬೇರೆ ಠಾಣೆಗೆ ವರ್ಗಾಯಿಸುತ್ತೇವೆಂದು ವರ್ಗಾವಣೆ ಮಾಡಿದಕ್ಕಾಗಿ ಮನನೊಂದು, ಅವಮಾನಗೊಂಡು, ಮಾನಸಿಕ ಹಿಂಸೆಯಾಗಿ ಒತ್ತಡದಿಂದ ಸಾವನ್ನಪಿದ್ದು, ಇಡೀ ನೌಕರರ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ. ಈ ದೇಶದಲ್ಲಿ ಪರಿಶಿಷ್ಟ ಜನಾಂಗದಲ್ಲಿ ಜನಿಸಿದ್ದೇ ತಪ್ಪಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೃತ ಪಿಎಸ್‌ಐ ಅವರ ಪತ್ನಿ ಲಿಖಿತ ದೂರು ನೀಡಿದರೂ ಕೂಡ ಪ್ರಕರಣ ದಾಖಲಿಸಲು ಸರಿಸುಮಾರು 16 ಗಂಟೆಗಳ ಕಾಲ ತಡೆದು ಹೋರಾಟಗಾರರ ಪ್ರತಿಭಟನೆಯ ಒತ್ತಡದಿಂದಾಗಿ ಪ್ರಕರಣ ದಾಖಲಿಸಿದ್ದು ನೋಡಿದರೆ ಒಬ್ಬ ಪೋಲಿಸ್ ಅಧಿಕಾರಿ ಮರಣದ ಪ್ರಕರಣ ಈ ರೀತಿಯಾದರೆ ಇನ್ನೂ ಸಾಮಾನ್ಯ ನೌಕರರ ಸ್ಥಿತಿ ಏನಾಗಬಹುದು ಎಂಬುದನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಂಡು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಂಘದ ಶ್ರೀಶೈಲ್ ಹೊಸ್ಮನಿ, ಸುರೇಶ ಬೊಮ್ಮನ್, ಎಚ್.ಬಿ.ಬಂಡಿ, ಬಸವರಾಜ ಚಟ್ನಳ್ಳಿ, ಭೀಮರಾಯ ಅಂಚೆಸುಗೂರು, ತಾಲೂಕು ಸಂಘದ ಅಧ್ಯಕ್ಷ ರಮೇಶ ಈಟೆ, ಗೋವಿಂದಮೂರ್ತಿ ಕಟ್ಟೀಮನಿ, ಮಲ್ಲಪ್ಪ ಮ್ಯಾಗೇರಿ, ಭಾರತಿ ಕಟ್ಟೀಮನಿ, ಕೈಲಾಸ್ ಅನ್ವಾರ್‌, ರಾಯಪ್ಪಸ ಆವೂರು, ಭೀಮರಾಯ ಬೊಮ್ಮನ್‌, ಮರೆಪ್ಪ ಚಟ್ಟೇರಕರ್‌, ಶ್ರೀಕಾಂತ ಸುಂಗಲಕರ್ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ಸರ್ಕಾರ 50 ಲಕ್ಷ ಪರಿಹಾರ ನೀಡಲಿ: ಪಿಎಸ್‌ಐ ಪರಶುರಾಮ ಛಲವಾದಿ ಅವರು ಹಠಾತ್ ನಿಧನದಿಂದಾಗಿ ಅವರ ಕುಟುಂಬ ಆರ್ಥಿಕವಾಗಿ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ಪರಿಹಾರವಾಗಿ ₹50 ಲಕ್ಷ ನೀಡಬೇಕು. ಪರಶುರಾಮ ಅವರು ಪಿಎಸ್‌ಐ ಹುದ್ದೆಯ ಸೇವೆಯಲ್ಲಿ ಇರುವಾಗಲೇ ತೀರಿಕೊಂಡಿದ್ದು, ಅನುಕಂಪದ ಆಧಾರದ ಅಡಿಯಲ್ಲಿ ಅವರ ಪತ್ನಿ ಅಥವಾ ಅವರು ಸೂಚಿಸಿದವರಿಗೆ ಪಿಎಸ್‌ಐ ಹುದ್ದೆ ನೀಡಬೇಕು ಎಂದು ಆಗ್ರಹಿಸಿದರು. ಪಿಎಸ್‌ಐ ಪರಶುರಾಮ ಛಲವಾದಿ ಅವರು ಹಠಾತ್ ನಿಧನದಿಂದಾಗಿ ಅವರ ಕುಟುಂಬ ಆರ್ಥಿಕವಾಗಿ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ಪರಿಹಾರವಾಗಿ ₹50 ಲಕ್ಷ ನೀಡಬೇಕು. ಪರಶುರಾಮ ಅವರು ಪಿಎಸ್‌ಐ ಹುದ್ದೆಯ ಸೇವೆಯಲ್ಲಿ ಇರುವಾಗಲೇ ತೀರಿಕೊಂಡಿದ್ದು, ಅನುಕಂಪದ ಆಧಾರದ ಅಡಿಯಲ್ಲಿ ಅವರ ಪತ್ನಿ ಅಥವಾ ಅವರು ಸೂಚಿಸಿದವರಿಗೆ ಪಿಎಸ್‌ಐ ಹುದ್ದೆ ನೀಡಬೇಕು ಎಂದು ಆಗ್ರಹಿಸಿದರು.