ಸಾರಾಂಶ
ಭಟ್ಕಳ ತಾಲೂಕಿನಾದ್ಯಂತ ಶಾಂತಿ ಭಂಗಕ್ಕೆ ಕಾರಣವಾಗುವ ಘಟನೆಗಳು ಪದೇ ಪದೇ ಸಂಭವಿಸುತ್ತಿದ್ದು, ಈ ಸಂದೇಹಾಸ್ಪದ ದುಷ್ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ಇಲ್ಲಿನ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಗುರುವಾರ ನಗರ ಠಾಣೆಯ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಭಟ್ಕಳ: ತಾಲೂಕಿನಾದ್ಯಂತ ಶಾಂತಿ ಭಂಗಕ್ಕೆ ಕಾರಣವಾಗುವ ಘಟನೆಗಳು ಪದೇ ಪದೇ ಸಂಭವಿಸುತ್ತಿದ್ದು, ಈ ಸಂದೇಹಾಸ್ಪದ ದುಷ್ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ಇಲ್ಲಿನ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಗುರುವಾರ ನಗರ ಠಾಣೆಯ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಮಂಗಳವಾರ ರಾತ್ರಿ ಪಟ್ಟಣದ ಮುರಿನಕಟ್ಟೆ ಪ್ರದೇಶದಲ್ಲಿರುವ ಮಾರಿ ದೇವಿಯ ಹೊರೆ ಇಡುವ ಸ್ಥಳದಿಂದ ಎರಡು ಮರದ ಬೊಂಬೆಗಳು ನಾಪತ್ತೆಯಾಗಿತ್ತು. ಇದಾದ ಬಳಿಕ ಗುರುವಾರ ಬೆಳಗಿನ ಜಾವ ತಾಪಂ ಎದುರುಗಡೆ ಇರುವ ರಾಮಚಂದ್ರ ನಾಯ್ಕ ಎಂಬವರ ಹಣ್ಣಿನ ಅಂಗಡಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಸಂಭವಿಸಿದೆ. ಕೋಮು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗುವ ಪಟ್ಟಣದಲ್ಲಿ ತನಿಖೆಗೆ ಪೂರಕವಾದ ಸಿಸಿ ಕ್ಯಾಮೆರಾ ಇಲ್ಲದಿರುವುದು ಹಾಗೂ ಈ ಹಿಂದೆ ಅಳವಡಿಸಲಾದ ಸಿಸಿ ಕ್ಯಾಮೆರಾಗಳನ್ನು ನಿರ್ವಹಣೆ ಮಾಡದೆ ಇರುವುದು ವ್ಯವಸ್ಥೆಗೆ ಹಿಡಿದ ಗ್ರಹಣವಾಗಿದ್ದು, ಇನ್ನಾದರೂ ಪುರಸಭೆ, ಪೊಲೀಸ್ ಇಲಾಖೆಯ ಸಮನ್ವಯತೆಯೊಂದಿಗೆ ಅಗತ್ಯವಿರುವ ಕಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ನಿಟ್ಟಿನಲ್ಲಿ ಚಿಂತಿಸಬೇಕಿದೆ ಎಂದು ಸಂಘಟನೆಯ ಸದಸ್ಯರು ಆಗ್ರಹಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಜಯಂತ ನಾಯ್ಕ ಬೆಣಂದೂರು, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ ಆಸರಕೇರಿ, ಪ್ರಮುಖರಾದ ದಿನೇಶ ನಾಯ್ಕ, ದೀಪಕ ನಾಯ್ಕ, ನಾಗೇಶ ನಾಯ್ಕ, ಕೇಶವ ನಾಯ್ಕ, ದಯಾನಂದ ನಾಯ್ಕ, ರಾಮಚಂದ್ರ ನಾಯ್ಕ ಮುಂತಾದವರಿದ್ದರು.