ಕೇಣಿ ವಾಣಿಜ್ಯ ಬಂದರು ನಿರ್ಮಾಣ ಕೈಬಿಡಲು ಒತ್ತಾಯ

| Published : Aug 01 2025, 12:30 AM IST

ಕೇಣಿ ವಾಣಿಜ್ಯ ಬಂದರು ನಿರ್ಮಾಣ ಕೈಬಿಡಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕೇಣಿ ಭಾಗದಲ್ಲಿ ಕೃಷಿಕರು ತಮ್ಮ ಜಮೀನಿನಲ್ಲಿ ಜೀವನೋಪಾಯಕ್ಕೆ ಭತ್ತ, ಕಲ್ಲಂಗಡಿ, ಶೇಂಗಾ ಹೀಗೆ ಅನೇಕ ಬಗೆಯ ತರಕಾರಿಗಳನ್ನು ಬೆಳೆದು ಜೀವನ ನಡೆಸಿಕೊಂಡು ಬಂದಿದೆ.

ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಾಣ ಮಾಡಲು ಉದ್ದೇಶಿತ ವಾಣಿಜ್ಯ ಬಂದರು ಕಾಮಗಾರಿ ಕೈಬಿಡುವಂತೆ ಕೇಣಿ ಗ್ರಾಮದ ಕೋಮಾರಪಂಥ ಸಮಾಜದವರಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಭಾವಿಕೇರಿ ಗ್ರಾಪಂ ಮಾಜಿ ಸದಸ್ಯ ಅಮರ ನಾಯ್ಕ ಮಾತನಾಡಿ, ಕೃಷಿಕ ಕೊಮಾರಪಂಥದವರು ಹಲವಾರು ವರ್ಷಗಳಿಂದ ಪಿತ್ರಾರ್ಜಿತ ಆಸ್ತಿಗಳನ್ನು ಹೊಂದಿ ಇಲ್ಲಿಯೇ ಹುಟ್ಟಿ ಬೆಳೆದು, ಮನೆ ಗುಡಿಸಲು ಕಟ್ಟಿಕೊಂಡು ಸಂಸಾರ ಮಾಡಿ, ಇಲ್ಲಿನ ತುಂಡು ಕೃಷಿ ಭೂಮಿಯಲ್ಲಿಯೇ ದುಡಿದು ಜೀವನ ಕಟ್ಟಿಕೊಂಡಿದ್ದೇವೆ. ಆದರೆ ಸದ್ಯ ದೇಶದ ಅಭಿವೃದ್ಧಿ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಗುತ್ತಿಗೆ ಪಡೆದ ಕಂಪನಿ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡಿ ಸಾವಿರಾರು ಕೃಷಿಕ ಕುಟುಂಬಗಳನ್ನು ಬಿದಿಪಾಲು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯವಾದಿ ಗುರು ನಾಯ್ಕ ಮಾತನಾಡಿ, ಕೇಣಿ ಭಾಗದಲ್ಲಿ ಕೃಷಿಕರು ತಮ್ಮ ಜಮೀನಿನಲ್ಲಿ ಜೀವನೋಪಾಯಕ್ಕೆ ಭತ್ತ, ಕಲ್ಲಂಗಡಿ, ಶೇಂಗಾ ಹೀಗೆ ಅನೇಕ ಬಗೆಯ ತರಕಾರಿಗಳನ್ನು ಬೆಳೆದು ಜೀವನ ನಡೆಸಿಕೊಂಡು ಬಂದಿದೆ. ಅದರಲ್ಲಿಯೂ ಇಲ್ಲಿ ಬೆಳೆಯುವ ಕಲ್ಲಂಗಡಿ ಹಣ್ಣು ಕೇರಳ ಹಾಗೂ ಗೋವಾ ರಾಜ್ಯಗಳಿಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗಿ ಅಂಕೋಲಾ ತಾಲೂಕಿನ ಹೆಸರು ಪ್ರಸಿದ್ಧಿ ಪಡೆದಿದೆ. ಇಂತಹ ಸಮೃದ್ಧ ಕೃಷಿ ಭೂಮಿಯನ್ನು ನಾವು ಬಿಡಲು ಸಾಧ್ಯವಿಲ್ಲ. ಈ ಬಂದರು ನಿರ್ಮಾಣವನ್ನು ವಿರೋಧಿಸಿ ಈ ಮೂಲಕ ತಹಶೀಲ್ದಾರ್ ಮೂಲಕ ಮನವಿ ಮಾಡಿ ಕೇಳುತ್ತಿದ್ದೇವೆ ಎಂದರು.

ಮೋಹನ್ ನಾಯ್ಕ, ಮಂಜುನಾಥ್ ನಾಯ್ಕ, ಪೀರು ನಾಯ್ಕ, ತೋಕು ನಾಯ್ಕ, ದಿಗಂಬರ ನಾಯ್ಕ, ನಾಗೇಶ್ ನಾಯ್ಕ, ಅಮರನಾಥ್ ನಾಯ್ಕ, ಮಾರುತಿ ನಾಯ್ಕ ಉಪಸ್ಥಿತರಿದ್ದರು.