ನಾಮಫಲಕಗಳಲ್ಲಿ ಶೇ.30 ತುಳು ಲಿಪಿಗೆ ಅವಕಾಶ ನೀಡುವಂತೆ ಆಗ್ರಹ

| Published : Mar 12 2024, 02:02 AM IST

ಸಾರಾಂಶ

ತುಳು ಭಾಷೆಯ ಲಿಪಿಯಲ್ಲಿಯೂ ನಾಮಫಲಕಗಳನ್ನು ಬರೆಯಲು ಆದೇಶ ನೀಡುವಂತೆ ಮಾಜಿ ಶಾಸಕ ಮೊಯಿದೀನ್ ಬಾವ ಹಾಗೂ ವಿವಿಧ ತುಳು ಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ2500 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ, ಸ್ವಂತ ಲಿಪಿ ಹೊಂದಿರುವ ತುಳು ಭಾಷೆಯ ಲಿಪಿಯಲ್ಲಿಯೂ ನಾಮಫಲಕಗಳನ್ನು ಬರೆಯಲು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಆದೇಶ ಹೊರಡಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಮೊಯಿದೀನ್ ಬಾವ ಹಾಗೂ ವಿವಿಧ ತುಳು ಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲಾಯಿತು.ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರು ಈ ಮನವಿಯನ್ನು ಸ್ವೀಕರಿಸಿ, ಅದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.ಇತ್ತೀಚೆಗೆ ರಾಜ್ಯ ಸರ್ಕಾರವು ಸಮಗ್ರ ಭಾಷಾ ಅಭಿವೃದ್ಧಿ ತಿದ್ದುಪಡಿ ಮಸೂದೆ-2024ರಲ್ಲಿ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.60ರಷ್ಟು ಬಳಸುವಂತೆ ಆದೇಶ ಹೊರಡಿಸಿದೆ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನ್ವಯಿಸುವಂತೆ ನಾಮಫಲಕಗಳಲ್ಲಿ ಶೇ.50ರಷ್ಟು ಕನ್ನಡ ಭಾಷೆಯನ್ನು ಬಳಸಿ, ಶೇ.30ರಷ್ಟು ತುಳು ಲಿಪಿಗೆ ಅವಕಾಶ ನೀಡಬೇಕು, ಉಳಿದ ಶೇ.20 ಭಾಗದಲ್ಲಿ ಇತರ ವ್ಯಾವಹಾರಿಕ ಭಾಷೆಗಳಿಗೆ ಅವಕಾಶ ನೀಡುವಂತೆ ಕೂಡಲೇ ವಿಶೇಷ ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ಸರ್ಕಾರವನ್ನು ಆಗ್ರಹಿಸಲಾಗಿದೆ.ಈ ಸಂದರ್ಭ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಆಕಾಶ್ ರಾಜ್ ಜೈನ್, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ತುಳು ಪರ ಹೋರಾಟಗಾರ ರೋಷನ್ ರೆನೋಲ್ಡ್, ಜೈ ತುಳುನಾಡು ಸಂಘಟನೆ ಅಧ್ಯಕ್ಷ ವಿಷು ಶ್ರೀಕೆರಾ, ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ತುಳುನಾಡು ಒಕ್ಕೂಟದ ಪ್ರಮುಖ ಮುಖಂಡರು, ರಾಜಕೀಯ ಮುಖಂಡರು ಸೇರಿದಂತೆ ಎಲ್ಲ ತುಳು ಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.