ಕಾಯಂ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯ

| Published : Jul 21 2025, 12:00 AM IST

ಸಾರಾಂಶ

ಮುಖ್ಯಶಿಕ್ಷಕರು ಮಾತ್ರ ಕಾಯಂ ಇದ್ದು, ಉಳಿದವರು ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಯಲಬುರ್ಗಾ: ತಾಲೂಕಿನ ಗಾಣಧಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಕೃಷಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಪಟ್ಟಣದ ಬಿಇಒ ಕಚೇರಿಯ ದೈಹಿಕ ಪರಿವೀಕ್ಷಕ ವೀರಭದ್ರಪ್ಪ ಅಂಗಡಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಉಪಾಧ್ಯಕ್ಷ ಹನುಮಂತಪ್ಪ ನಾಗರಾಳ ಮಾತನಾಡಿ, ಗಾಣಧಾಳ ಪ್ರಾಥಮಿಕ ಶಾಲೆಯಲ್ಲಿ ೭೫೦ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರ ಕೊರತೆ ಕಾಡುತ್ತಿದೆ. ಮುಖ್ಯಶಿಕ್ಷಕರು ಮಾತ್ರ ಕಾಯಂ ಇದ್ದು, ಉಳಿದವರು ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ವಿಷಯವಾರು ಕಾಯಂ ಶಿಕ್ಷಕರನ್ನು ನೇಮಿಸಬೇಕೆಂದು ಆಗ್ರಹಿಸಿದರು.

ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿ ಮಾರುತಿ ಹೆಗಡೆ ಮಾತನಾಡಿ, ಚಿಕ್ಕಮನ್ನಾಪುರ ಶಾಲೆಯ ಶಿಕ್ಷಕರನ್ನು ಡೆಪ್ಯೂಟಿ ಎಂದು ನೇಮಕ ಮಾಡಿರುವುದರಿಂದ ಅವರನ್ನು ಗಾಣಧಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಂ ನೇಮಕಾತಿ ಮಾಡಬೇಕು. ಅಲ್ಲದೆ ಶಾಲೆಗೆ ಇನ್ನೂ ೧೦ ಜನ ಸರ್ಕಾರಿ ಶಿಕ್ಷಕರನ್ನು ಕಳುಹಿಸಿ ಕೊಡಬೇಕು. ಶಾಲೆಗೆ ಮೂಲ ಸೌಕರ್ಯ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಹನುಮಗೌಡ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಶಂಕ್ರಪ್ಪ ತಳವಾರ್, ಅಮರೇಶ ಪೊಲೀಸ್ ಗೌಡ, ಮಲ್ಲಪ್ಪ ಲಕ್ಕಲಕಟ್ಟಿ, ಮರಿಯಪ್ಪ ತಳವಾರ್ ಸೇರಿದಂತೆ ಮತ್ತಿತರು ಇದ್ದರು.