ಸಾರಾಂಶ
- ಸುದ್ದಿಗೋಷ್ಠಿಯಲ್ಲಿ ಕಡಹಿನಬೈಲು ಗ್ರಾಮಸ್ಥರ ಒತ್ತಾಯ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನಾದ್ಯಂತ ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ಬೆಳೆ ಹಾನಿ, ಪ್ರಾಣ ಹಾನಿ ಮಾಡುತ್ತಿರುವುದರಿಂದ ತುರ್ತಾಗಿ ಸೋಲಾರ್ ಟೆಂಟಕಲ್ ಪೆನ್ಸಿಂಗ್ ಬೇಲಿ ನಿರ್ಮಾಣ ಮಾಡಬೇಕು ಎಂದು ಕಡಹಿನಬೈಲು ಗ್ರಾಪಂ ಪ್ರಗತಿ ಪರ ಕೃಷಿಕರಾದ ಎಸ್.ಡಿ.ರಾಜೇಂದ್ರ, ಗಾಂಧಿಗ್ರಾಮ ನಾಗರಾಜ, ಸೂಸಲವಾನಿ ರಂಜು ಹಾಗೂ ಇತರ ಗ್ರಾಮಸ್ಥರು ಸರ್ಕಾರವನ್ನು ಆಗ್ರಹಪಡಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಡಹಿನಬೈಲು ಗ್ರಾಪಂ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈ ವರ್ಷ ನೂರಾರು ಕಾಡಾನೆಗಳು ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಇಬ್ಬರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಅಭಯಾರಣ್ಯದಿಂದ ಕಾಡಾನೆಗಳು ನಾಡಿಗೆ ಬಾರದಂತೆ ಶಾಶ್ವತ ಪರಿಹಾರ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾರ್ಗದರ್ಶನದಲ್ಲಿ ಕಡಹಿನಬೈಲು ಗ್ರಾಪಂಗೆ ಸೇರಿದ ರೈತರ ತಂಡವೊಂದು ಬುಧವಾರ ಮೂಡಿಗೆರೆ ತಾಲೂಕಿನ ತತ್ಕೋಳ ಮೀಸಲು ಅರಣ್ಯದಲ್ಲಿ ಕಾಡಾನೆ ಬಾರದಂತೆ ನಿರ್ಮಿಸಿರುವ ಸೋಲಾರ್ ಟೆಂಟಿಕಲ್ ಪೆನ್ಸಿಂಗ್ ನ್ನು ವೀಕ್ಷಿಸಿ ಬಂದಿದ್ದೇವೆ ಎಂದರು.ಮೂಡಿಗೆರೆ ತಾಲೂಕಿನ ತತ್ಕಳ ಮೀಸಲು ಅರಣ್ಯದಲ್ಲಿ ಸೋಲಾರ್ ಟೆಂಟಿಕಲ್ ಪೆನ್ಸಿಂಗ್ ಮಾಡಿ 7 ವರ್ಷ ಕಳೆದಿದ್ದು ಇಲ್ಲಿ ವರೆಗೂ ಕಾಡಾನೆಗಳು ಬೇಲಿ ದಾಟಿ ನಾಡಿಗೆ ಬಂದಿಲ್ಲ. ಅದ್ಭುತವಾಗಿ ಬೇಲಿ ನಿರ್ವಹಣೆ ಮಾಡುತ್ತಿದ್ದಾರೆ. ಸೋಲಾರ್ ಟೆಂಟಿ ಕಲ್ ಪೆನ್ಸಿಂಗ್ 15 ಅಡಿ ಎತ್ತರವಿದೆ. ಪ್ರತಿ 6 ಕಿ.ಮೀ ದೂರದವರೆಗೆ ಬೇಲಿ ನೋಡಿಕೊಳ್ಳಲು ಒಬ್ಬ ನೌಕರನ್ನು ನೇಮಿಸಿದ್ದಾರೆ. ಬೇಲಿ ಒಂದು ಭಾಗದಲ್ಲಿ ಆನೆ ಕಂದಕ ಹಾಗೂ ಇನ್ನೊಂದು ಬದಿಯಲ್ಲಿ ರಸ್ತೆ ನಿರ್ಮಿಸಿದ್ದಾರೆ. ಮಳೆಗಾಲ ದಲ್ಲೂ ಸೋಲಾರ್ ಬೇಲಿಕೆಲಸ ಮಾಡುತ್ತಿದೆ. ಇದುವರೆಗೂ ಆನೆ ಆ ಬೇಲಿಯನ್ನು ದಾಟಿಲ್ಲ. ಆಗಿನ ಕಾಲದಲ್ಲಿ 1 ಕಿ.ಮೀ. ಸೋಲಾರ್ ಟೆಂಟಿಕಲ್ ಬೇಲಿ ನಿರ್ಮಿಸಲು ₹4 ಲಕ್ಷ ಬೇಕಾಗಿತ್ತು. ಈಗ 1 ಕಿಮೀಗೆ ₹8 ಲಕ್ಷ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ ಎಂದರು.
ರೇಲ್ವೆ ಬ್ಯಾರಿಕೇಡ್ ದುಬಾರಿ: ಕಾಡಾನೆಗಳು ನಾಡಿಗೆ ಬಾರದಂತೆ ರೇಲ್ವೆ ಬ್ಯಾರಿಕೇಡ್ ನಿರ್ಮಿಸಬೇಕಾದರೆ 1 ಕಿ.ಮೀ.ಗೆ ಅಂದಾಜು ₹1 ಕೋಟಿ ಬೇಕಾಗಬಹುದು. ಸೋಲಾರ್ ಪೆಂಟಿಕಲ್ ಪೆನ್ಸಿಂಗ್ ಮಾಡಲು 1 ಕಿ.ಮೀ.ಗೆ ಕೇವಲ ₹8 ಲಕ್ಷ ಸಾಕು. ಅಲ್ಲದೆ ರೇಲ್ವೆ ಬ್ಯಾರಿಕೇಡ್ ಮಾಡಲು ದೀರ್ಘ ಸಮಯ ಬೇಕು. ಅಲ್ಲಿಯವರೆಗೆ ಅಪಾರ ಬೆಳೆಹಾನಿ ಹಾಗೂ ಪ್ರಾಣಿ ಹಾನಿ ಆಗುವ ಸಂಭವವಿದೆ. ಆದ್ದರಿಂದ ಅರಣ್ಯ ಇಲಾಖೆ, ಶಾಸಕರು, ಜನಪ್ರತಿನಿಧಿಗಳು ತುರ್ತಾಗಿ ಸೋಲಾರ್ ಪೆಂಟಿಕಲ್ ಪೆನ್ಸಿಂಗ್ ಮಾಡಿಸಿಕೊಡಬೇಕು ಎಂದು ಆಗ್ರಹಿಸಿದರು.ನರಸಿಂಹರಾಜಪುರ ತಾಲೂಕಿನ ಮಾರಿದಿಬ್ಬದಿಂದ ಜೈಲ್ ಬಿಲ್ಡಿಂಗ್ ಮಾರ್ಗವಾಗಿ ಹೆನ್ನಂಗಿ -ಬೆಳ್ಳಂಗಿ ರೆಗೆ ಅಂದಾಜು ಅಂದಾಜು 80 ಕಿ.ಮೀ.ದೂರವಾಗಲಿದೆ. ತತ್ಕೋಳ ಮೀಸಲು ಅರಣ್ಯದಲ್ಲಿ ಮಾಡಿದ ರೀತಿಯಲ್ಲೇ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಸೋಲಾರ್ ಟೆಂಟಿಕಲ್ ಪೆನ್ಸಿಂಗ್ ಮಾಡಿಸಿಕೊಟ್ಟು ರೈತರ ಬೆಳೆ, ಪ್ರಾಣಹಾನಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಪ್ರಗತಿಪರ ರೈತರಾದ ಎಸ್.ಡಿ.ರಾಜೇಂದ್ರ, ಗಾಂಧಿಗ್ರಾಮ ನಾಗರಾಜ, ಸೂಸಲವಾನಿ ರಂಜು,ಗುಳದಮನೆ ಸುಂದರೇಶ್, ಎಂ.ಕೆ.ಎಲ್ದೋಸ್, ಶೆಟ್ಟಿಕೊಪ್ಪ ಮಹೇಶ್ ಇದ್ದರು.