ರೋಣ: ಪಟ್ಟಣದ ಶಿವಪೇಟೆ, ಶಿವಾನಂದ ನಗರ ಸೇರಿದಂತೆ ವಿವಿಧೆಡೆ ಗಟಾರಗಳು ಪ್ಲಾಸ್ಟಿಕ್ ಹಾಳೆ, ಕಸ, ಕಡ್ಡಿ, ಹುಲ್ಲುಗಳಿಂದ ತುಂಬಿದ್ದು, ಇದರಿಂದ ಗಬ್ಬು ವಾಸನೆ, ಸೊಳ್ಳೆ ಕಾಟ ವಿಪರೀತವಾಗಿದ್ದು, ಕನಿಷ್ಠ ಪಕ್ಷ ವರ್ಷಕ್ಕೊಮ್ಮೆಯಾದರೂ ಗಟಾರ್ ಕ್ಲಿನ್ ಗೆ ಮುಂದಾಗಿ ಎಂದು ರೋಣ ಪಟ್ಟಣದ ಶಿವಪೇಟಿ, ಶಿವಾನಂದ ನಗರ ಜನತೆ ಸ್ಥಳೀಯ ಪುರಸಭೆಗೆ ಆಗ್ರಹಿಸುತ್ತಿದ್ದಾರೆ.
ಶಿವಪೇಟಿ 8ನೇ ಕ್ರಾಸ್ ನಲ್ಲಿ ಸೊಬರದ ಮನೆ ಹತ್ತಿರ ಇರುವ ಗಟಾರ ಕಸ, ಕಡ್ಡಿ, ಹುಲ್ಲು, ಪ್ಲಾಸ್ಟಿಕ್ ಹಾಳೆಗಳಿಂದ ತುಂಬಿದ್ದು, ಗಲೀಜು ನೀರು ಹರಿಯದೇ ನಿಂತಲ್ಲೆ ನಿಲ್ಲುತ್ತಿದೆ. ಇದರಿಂದ ಒಬ್ಬ ವಾಸನೆ, ಸೊಳ್ಳೆ ಕಾಟ ವಿಪರೀತವಾಗಿದ್ದು, ಜನತೆಯನ್ನು ಕಾಯಿಲೆ ಭೀತಿ ಕಾಡುತ್ತಿದೆ.ಜತೆಗೆ ಗಬ್ಬು ವಾಸನೆ. ನಿತ್ಯ ಮೂಗು ಮುಚ್ಚಿಕೊಂಡು ಕುಳಿತುಕೊಳ್ಳುವ ದುಸ್ಥಿತಿ ನಿರ್ಮಾಣವಾಗಿದೆ. ಗಟಾರ ಸ್ವಚ್ಛ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ. ಕನಿಷ್ಠ ಪಕ್ಷ ವರ್ಷಕ್ಕೊಮ್ಮೆಯಾದರೂ ಗಟಾರ್ ಸ್ವಚ್ಛ ಮಾಡಿ ಪುಣ್ಯ ಕಟ್ಡಿಕೊಳ್ಳಿ ಎಂದು ಬೇಡಿಕೊಂಡು ಪುರಸಭೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಶಿವಪೇಟಿ 8ನೇ ಕ್ರಾಸ್ ಜನತೆ ಅಧಿಕಾರಿಗಳ ಧೋರಣೆ ಹಿಡಿಶಾಪ ಹಾಕುತ್ತಿದ್ದಾರೆ.
ಶಿವಾನಂದ ನಗರದ ದೊಡ್ಡ ಗಟಾರ ನಿರ್ಮಿಸಿ 6 ತಿಂಗಳಾಗಿಲ್ಲ. ಆಗಲೇ ಗಟಾರ ಗಲೀಜಿನಿಂದ ತುಂಬಿ ನೀರು ಹರಿಯದಂತಾಗಿದೆ. ಇದರಿಂದ ಗಬ್ಬು ವಾಸನೆ, ಸೊಳ್ಳೆ ಕಾಟ ವಿಪರೀತವಾಗಿದೆ. ಶಿವಾನಂದ ನಗರದಲ್ಲಿ 2, 3, 4, 5ನೇ ಕ್ರಾಸ್ ನಲ್ಲಿರುವ ಗಟಾರ ಸ್ವಚ್ಛ ಮಾಡಲು ಪುರಸಭೆ ಕ್ರಮ ಕೈಗೊಂಡಿಲ್ಲ.ಹೀಗೆ ಪಟ್ಟಣ ಶಿವಪೇಟಿ ಬಡಾವಣೆಯ ವಿವಿಧ ಕ್ರಾಸ್ ಶಿವಾನಂದ ನಗರದ ವಿವಿಧ ಕ್ರಾಸ್ ನಲ್ಲಿ ಗಲೀಜಿನಿಂದ ತುಂಬಿರುವ ಗಟಾರ್ ಸ್ವಚ್ಛತೆ ಕೂಡಲೇ ಪುರಸಭೆ ಮುಂದಾಗಬೇಕು. ಮಳೆಯಾದಲ್ಲಿ ಗಟಾರ್ ತುಂಬಿ ಗಲೀಜು ನೀರು ಮನೆಗೆ ನುಗ್ಗುವ ಸಾಧ್ಯತೆಯಿದೆ. ಕೂಡಲೇ ಗಟಾರ್ ಸ್ವಚ್ಛ ಮಾಡುವಲ್ಲಿ ಕ್ರಮ ಕೈಗೊಳ್ಳಿದ್ದರೆ ರಸ್ತೆಗಿಳಿದು ಪ್ರತಿಭಟಿಸಲಾಗುವುದು ಎಂದು ಜನತೆ ಎಚ್ಚರಿಸಿದ್ದಾರೆ.