ಸಾರಾಂಶ
ಪಟ್ಟಣದ ಹಿಂದೂ ರುದ್ರಭೂಮಿ ಅತಿಕ್ರಮಣ ತೆರವುಗೊಳಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಗುರುವಾರ ಕರೆ ಕೊಟ್ಟ ಔರಾದ್ ಬಂದ್‌ಗೆ ಪಟ್ಟಣದ ವ್ಯಾಪಾರಿಗಳು ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಔರಾದ್: ಪಟ್ಟಣದ ಹಿಂದೂ ರುದ್ರಭೂಮಿ ಅತಿಕ್ರಮಣ ತೆರವುಗೊಳಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಗುರುವಾರ ಕರೆ ಕೊಟ್ಟ ಔರಾದ್ ಬಂದ್‌ಗೆ ಪಟ್ಟಣದ ವ್ಯಾಪಾರಿಗಳು ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಗುರುವಾರ ಬೆಳಗ್ಗೆ ಪಟ್ಟಣದ ಅಮರೇಶ್ವರ ಮಂದಿರದಲ್ಲಿ ವ್ಯಾಪಾರಿ ಸಂಘದ ಅಧ್ಯಕ್ಷ ಸಂದೀಪ ಮೀಸೆ ನೇತೃತ್ವದಲ್ಲಿ ಸೇರಿದ ಪಟ್ಟಣದ ನೂರಾರು ವ್ಯಾಪಾರಿಗಳು ಪ್ರತಿಭಟನಾ ರ್‍ಯಾಲಿ ನಡೆಸಿ ಕನ್ನಡಾಂಬೆ ವೃತ್ತದಿಂದ ಮುಖ್ಯ ರಸ್ತೆ ಮೂಲಕ ತಹಸೀಲ್ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಮನವಿ ಸಲ್ಲಿಸಿದರು.ಕನ್ನಡಪರ ಹೋರಾಟಗಾರ ಬಸವರಾಜ ಶಟಕಾರ ಮಾತನಾಡಿ, ಹಿಂದೂ ರುದ್ರಭೂಮಿ ಒತ್ತುವರಿಯಾಗಿ ಹಲವು ದಶಕಗಳು ಕಳೆದಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಹಲವು ಸಂಶಯಗಳು ಹುಟ್ಟುಹಾಕಿದೆ. ಸ್ಮಶಾನ ಭೂಮಿಯಲ್ಲಿ ಕೆಲವರು ಅಂಗಡಿಗಳು ನಿರ್ಮಿಸಿ ಬಾಡಿಗೆ ನೀಡಿ, ಹಣ ಸಂಪಾದನೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ವ್ಯಾಪರಿ ಸಂಘದ ಅಧ್ಯಕ್ಷ ಸಂದೀಪ ಮೀಸೆ ಮಾತನಾಡಿ, ಪಟ್ಟಣದಲ್ಲಿ ವಾಸಿಸುವ ಜನರ ಅನುಕೂಲಕ್ಕಾಗಿ ಸಂಘ ಸದಾ ಸಿದ್ದವಿದ್ದು, ಪಟ್ಟಣದ ಸ್ಮಶಾನ ಭೂಮಿ ವಿವಾದ ಹಲವು ದಶಕಗಳಿಂದ ಕಗ್ಗಾಂಟಾಗಿಯೇ ಉಳಿದಿದ್ದು ವಿಪರ್ಯಾಸ. ಇದರ ಕುರಿತು ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಈ ವಿವಾದಕ್ಕೆ ಅಂತ್ಯ ಹಾಡಬೇಕು ಎಂದು ಆಗ್ರಹಿಸಿದರು.ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ, ಪ್ರತಿಭಟನಾ ನಿರತ ಹೋರಾಟಗಾರರ ಮನವೊಲಿಸುವ ಪ್ರಯತ್ನ ಮಾಡಿದರೂ ಹೋರಾಟಗಾರರು ಅದಕ್ಕೆ ಒಪ್ಪಲಿಲ್ಲ.
ಈ ಸಂದರ್ಭದಲ್ಲಿ ವ್ಯಾಪಾರಿಗಳಾದ ಅಂಬ್ರೇಶ ಮಾಳೆಗಾಂವಕರ್, ಬಾಲರಾಜ ಏಂಡೆ, ಸಂಜುಕುಮಾರ ನೌಬಾದೆ, ಆನಂದ ಘೂಳೆ, ವಿಜಯ ನಿರ್ಮಳೆ, ನಾಗರಾಜ ಉಪ್ಪೆ, ವಿರೇಶ ಸ್ವಾಮಿ, ಮಲ್ಲು ಎಡವೆ, ಅಂಬ್ರೇಶ ಮಸ್ಕಲೆ, ಶಿವಕುಮಾರ ಬೋರಗೆ, ಬಸವರಾಜ ದೇಶಮುಖ, ಕಲ್ಲಪ್ಪ ದೇಶಮುಖ, ರವೀಂದ್ರ ಮೀಸೆ, ಶರಣಪ್ಪ ಪಾಟೀಲ್, ಅನೀಲ ಹೇಡೆ, ಶಿವಶಂಕರ ನಿಸ್ಪತೆ, ಸಿದ್ದು ಚಾರೆ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.