ಸಾರಾಂಶ
ಹರಪನಹಳ್ಳಿ: ಪಟ್ಟಣದ ವ್ಯಾಪ್ತಿಯಲ್ಲಿ ಪುರಸಭೆ ಜಾಗವನ್ನು ಕೆಲವರು ಒತ್ತವರಿ ಮಾಡಿಕೊಂಡಿದ್ದಾರೆ ಕೂಡಲೇ ಅವುಗಳನ್ನು ತೆರವುಗೊಳಿಸಬೇಕೆಂದು ಪುರಸಭೆ ಸದಸ್ಯರು ಆಗ್ರಹಿಸಿದರು.
ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಫಾತಿಮಾಬಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಟ್ಟಣದ ವ್ಯಾಪ್ತಿಯಲ್ಲಿ ಪಾರ್ಕ್ ಸೇರಿದಂತೆ ಹಲವು ಕಡೆ ಜಾಗ ಒತ್ತುವರಿಯಾಗಿದೆ. ದೊಡ್ಡವರು ಸಹ ಪುರಸಭೆ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ ದೂರುಗಳಿವೆ. ಪುರಸಭೆ ಈ ಬಗ್ಗೆ ಗಮನ ಹರಿಸಿ ಒತ್ತುವರಿ ಆಗಿರುವ ಜಾಗವನ್ನು ತೆರವುಗೊಳಿಸಬೇಕು ಎಂದರು.ಆಶ್ರಯ ಬಡಾವಣೆಯಲ್ಲಿ ಬಡವರು ಮನೆ ಕಟ್ಟಿಕೊಂಡಿದ್ದಾರೆ. ಬಡವರ ಮೇಲೆ ಬ್ರಹ್ಮಾಸ್ತ್ರ ಬೇಡ, ಅನೇಕ ಸದಸ್ಯರು, ಶ್ರೀಮಂತರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಅಂತವರನ್ನು ಮೊದಲು ತೆರವುಗೊಳಿಸಿ ಎಂದು ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಒತ್ತಾಯಿಸಿದರು.
ರೊಕ್ಕಪ್ಪ, ಲಾಟಿ ದಾದಾಪೀರ, ಮಂಜುನಾಥ ಇಜಂತಕರ್, ಜಾಕೀರ ಹುಸೇನ್ ಸೇರಿದಂತೆ ಅನೇಕರು ಸರ್ಕಾರಿ ಜಾಗ ಒತ್ತುವರಿ ತೆರವು ಕುರಿತು ಮಾತನಾಡಿದರು. ಹಿರಿಯ ಸದಸ್ಯ ಅಬ್ದುಲ್ ರಹಿಮಾನ್ ಪಟ್ಟಣದಲ್ಲಿ ಹಳೆ ಊರು ಹೊರತು ಪಡಿಸಿ ಹೊಸ ಬಡಾವಣೆಗಳಲ್ಲಿ ಒತ್ತುವರಿ ಇದ್ದರೆ ತೆರವುಗೊಳಿಸಿಕೊಳ್ಳಿ ಎಂದು ಹೇಳಿದರು.ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಒತ್ತುವರಿ ಬಗ್ಗೆ ನಿರ್ಧಿಷ್ಟ ಮಾಹಿತಿ ಕೊಡಿ ತೆರವು ಗೊಳಿಸಲಾಗುವುದು ಎಂದು ಹೇಳಿದರು.
ಎಂ.ಜಾವೇದ್ ಕೊಟ್ಟೂರು ವೃತ್ತದಲ್ಲಿನ ಅವೈಜ್ಞಾನಿಕ ಸರ್ಕಲ್ ತೆರವಿಗೆ ಒತ್ತಾಯಿಸಿದರು.ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಬಾಲಕಿಯರಿಗಾಗಿ ವಸತಿ ಶಾಲೆ ಪ್ರಾರಂಭಿಸಲು ಹಗರಿಬೊಮ್ಮನಹಳ್ಳಿ ಲಿಂಗಾಯಿತ ಪಂಚಮಸಾಲಿ ಟ್ರಸ್ಟ್ನವರು ಪುರಸಭೆ ಜಾಗಕ್ಕಾಗಿ ಅರ್ಜಿ ಸಲ್ಲಿಸಿದ್ದು, ಸಭೆ ಇದಕ್ಕೆ ಅನುಮೋದಿಸಿತು.
ಇತರ ಸಮಾಜದವರು ಸಹ ಸಿಎ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವುದು ಇದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಿ ಎಂದು ಎಂ.ವಿ.ಅಂಜಿನಪ್ಪ ಹೇಳಿದರು.ಬೆಂಗಳೂರಿನ ಕೆ.ವಿಜಯ ಮುಳುಗುಂದ ಟ್ರಸ್ಟಿ ಪಟ್ಟಣದಲ್ಲಿ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕಾಗಿ ಖಾಲಿ ನಿವೇಶನ ಕೋರಿ ಪುರಸಭೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಬಗ್ಗೆ ನೋಟಿಫಿಕೇಶನ್ ಹೊರಡಿಸಿದ್ದು, ಯಾವುದೇ ಆಕ್ಷೇಪಣೆ ಇಲ್ಲದ ಕಾರಣ ಸಭೆ ಒಪ್ಪಿಗೆ ಸೂಚಿಸಿತು.
ಹರಪನಹಳ್ಳಿ ಪಟ್ಟಣದ ವ್ಯಾಪ್ತಿಯಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣಕ್ಕಾಗಿ ಕಚೇರಿಯಿಂದ ಪಡೆದ ಕಟ್ಟಡ ಪರವಾನಗಿ ಅವಧಿ ಮುಕ್ತಯಗೊಂಡ ಪ್ರಕರಣಗಳಿಗೆ ಪರವಾನಗಿ ನವೀಕರಣಕ್ಕೆ ಚದರ ಅಡಿ ಲೆಕ್ಕದಲ್ಲಿ ಶುಲ್ಕ ನಿಗದಿಪಡಿಸಲು ಸಭೆ ಒಪ್ಪಿಗೆ ಸೂಚಿಸಿತು.ಪುರಸಭೆ ಅಧ್ಯಕ್ಷೆ ಫಾತಿಮಾಬಿ, ಉಪಾಧ್ಯಕ್ಷ ಎಚ್.ಕೊಟ್ರೇಶ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಪುರಸಭೆ ಸದಸ್ಯರು ಸಿಬ್ಬಂದಿ ಇದ್ದರು.
ಹರಪನಹಳ್ಳಿ ಪುರಸಭೆ ಅಧ್ಯಕ್ಷೆ ಫಾತಿಮಾಬಿ ಅಧ್ಯಕ್ಷತೆಯಲ್ಲಿ ಗುರುವಾರ ಪುರಸಭೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು.