ಸಾರಾಂಶ
ಭವಿಷ್ಯದ ಪೀಳಿಗೆಯವರ ಹಿತಕ್ಕಾಗಿ ಈ ಕೆರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈಗಾಗಲೇ ನಡೆದಿರುವ ಸುಮಾರು ಅರ್ಧ ಎಕರೆಯಷ್ಟು ಕೆರೆಯ ಅತಿಕ್ರಮಣವನ್ನು ಖುಲ್ಲಾಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಕುಂದರಗಿಯ ಉಮಾಮಹೇಶ್ವರ ದೇವಸ್ಥಾನದ ಎದುರಿನ ಸರ್ವೇ ನಂ. ೧೭ರಲ್ಲಿ ಸುಮಾರು ೧ ಎಕರೆ ೨೭ ಗುಂಟೆ ವಿಸ್ತೀರ್ಣದ ಕೆರೆ ಹೂಳು ತುಂಬಿಕೊಂಡಿದೆ. ಅಲ್ಲದೇ ಕೆರೆಯನ್ನು ಕೆಲವರು ಅತಿಕ್ರಮಿಸಿ ಜಮೀನು ಮಾಡಿಕೊಂಡಿದ್ದಾರೆ.ಈ ಕುರಿತು ಕೆಲವು ವರ್ಷಗಳಿಂದ ಸರ್ಕಾರಿ ಸರ್ವೇ ನಂಬರಿನಲ್ಲಿರುವ ಕೆರೆಯನ್ನು ಅತಿಕ್ರಮಣದಿಂದ ಬಿಡುಗಡೆ ಮಾಡಿ, ಸಂರಕ್ಷಿಸುವಂತೆ ಅನೇಕರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲದಿರುವುದರ ಕುರಿತು ಊರಿನ ಸಾರ್ವಜನಿಕ ಹಿತಾಸಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಅಪಾರ ನೀರಿನ ಒರತೆ ಇರುವ ಈ ಕೆರೆಯಲ್ಲಿ ಸಮೃದ್ಧವಾಗಿ ನೀರಿದ್ದರೆ ಮಾತ್ರ ಊರಿನ ೧೦- ೧೫ ಬಾವಿಗಳಲ್ಲೂ ನೀರಿನ ಕೊರತೆಯಾಗುವುದಿಲ್ಲ. ಆದರೆ, ಅತಿಕ್ರಮಣದಿಂದ ಮತ್ತು ಹೂಳೆತ್ತಿಸದ ಪರಿಣಾಮ ಕೆರೆ ಬರಡಾದರೆ ಇಂತಹ ಬರಗಾಲದ ಸಂದರ್ಭದಲ್ಲಿ ಊರಿನ ಬಾವಿಗಳಲ್ಲೂ ನೀರಿನ ಕೊರತೆ ಕಂಡುಬರುತ್ತಿದೆ.
ಕಳೆದ ೩- ೪ ವರ್ಷಗಳ ಹಿಂದೊಮ್ಮೆ ಬಾಧಿಸಿದ್ದ ಇಂತಹುದೇ ಬರಗಾಲದಲ್ಲಿ ಕೆರೆ ಮತ್ತು ಊರಿನ ಬಾವಿಗಳು ಬತ್ತಿದ್ದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಈ ಹಿನ್ನೆಲೆ ಕುಂದರಗಿಗೆ ನೀರಿನ ಅಭಾವವಾಗದಂತೆ ಮತ್ತು ಜಮೀನುಗಳ ಸಮೃದ್ಧತೆಯ ಉದ್ದೇಶದಿಂದ ಇಂತಹ ಕೆರೆಯನ್ನು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಯಾವುದೇ ಮುಲಾಜಿಗೊಳಗಾಗದೇ; ಯಾವ ವಶೀಲಿಗಳಿಗೂ ತಲೆ ತಗ್ಗಿಸದೇ ತಕ್ಷಣದಲ್ಲಿ ಹೂಳೆತ್ತಿಸಿ; ಭವಿಷ್ಯದ ಪೀಳಿಗೆಯವರ ಹಿತಕ್ಕಾಗಿ ಈ ಕೆರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈಗಾಗಲೇ ನಡೆದಿರುವ ಸುಮಾರು ಅರ್ಧ ಎಕರೆಯಷ್ಟು ಕೆರೆಯ ಅತಿಕ್ರಮಣವನ್ನು ಖುಲ್ಲಾಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.